ಶ್ರೀಲಂಕಾ: ಆರ್ಥಿಕ ದಿವಾಳಿಯಿಂದ ಕಂಗೆಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿದಿದೆ. ಸರ್ಕಾರದ ವಿರುದ್ಧ ದೇಶವಾಸಿಗಳ ಬೃಹತ್ ಪ್ರತಿಭಟನೆ ಹಾಗೂ ಕಳೆದ ಒಂದು ವಾರದಿಂದ ನಡೆದ ನಾಟಕೀಯ ಬೆಳವಣಿಗೆಯ ನಂತರ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಅಲ್ಲಿನ ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ದನ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ
73 ವರ್ಷದ ಗೋಟಬಯ, ಖಾಸಗಿ ಭೇಟಿಯಲ್ಲಿ ಸಿಂಗಾಪುರಕ್ಕೆ ತೆರಳುತ್ತಿದ್ದಂತೆಯೇ, ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರವನ್ನು ಇ-ಮೇಲ್ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ, ಅಧ್ಯಕ್ಷ ರಾಜಪಕ್ಸ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪೀಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
7 ದಿನಗಳಲ್ಲಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲಾ ಶಾಸಕರು ಭಾಗವಹಿಸಲು ಶಾಂತಿಯುತವಾಗಿ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶನಿವಾರ ಶ್ರೀಲಂಕಾ ಸಂಸತ್ತು ಸಭೆ ಸೇರಲಿದೆ.