‘ಕಾಮನ್ ವೆಲ್ತ್’ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದ ‘ನಮೋ’

ನವದೆಹಲಿ: ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುವ ಕಾಮನ್ ವೆಲ್ತ್ 2022 ರಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳ ಜೊತೆ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಸ್ಪರ್ದಿಗಳ ಜೊತೆ ಸಂವಾದ ನಡೆಸಿ ಸ್ಫೂತಿದಾಯಕ ಮಾತುಗಳನ್ನು ಹೇಳಿ ಕ್ರೀಡಾಳುಗಳನ್ನ ಹುರಿದುಂಬಿಸಿದ್ದಾರೆ.

ವೀಡಿಯೋ ಸಂವಾದದಲ್ಲಿ ಮಾತನಾಡಿದ ಮೋದಿ ಭಾರತೀಯ ಕ್ರೀಡಾಪಟುಗಳು ಕಾಮನ್‌ ವೆಲ್ತ್ ನಲ್ಲಿ ಮಿಂಚುವುದನ್ನ ನಾನು ನೋಡುತ್ತೇನೆ. ಈ ಬಗ್ಗೆ ನನಗೆ ಅಪಾರವಾದ ಭರವಸೆಯಿದೆ. ಈಗಾಗಲೇ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅನೇಕ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದಾರೆ. ಆದರೆ ಮೊದಲ ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ 65 ಕ್ರೀಡಾಪಟುಗಳು ಕ್ರೀಡಾ ಜಗತ್ತಿನಲ್ಲಿ ಶಾಶ್ವತವಾದ ಛಾಪು ಮೂಡಿಸುತ್ತಾರೆ ಎಂದು ನನಗೆ ನಂಬಿಕೆ ಇದೆ. 2022 ರ ಕಾಮನ್ ವೆಲ್ತ್ ನಲ್ಲಿ ಭಾಗವಹಿಸುವ ಎಲ್ಲರಿಗೂ ನಾನು ಶುಭ ಹಾರೈಸುತ್ತೇನೆ ಎಂದು ಸ್ಪೂರ್ತಿದಾಯಕ ನುಡಿಗಳನ್ನಾಡಿದರು.

ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ ಅಥ್ಲೀಟ್ ಅವಿನಾಶ್ ಸೇಬಲ್, ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ, ಶಟ್ಲರ್ ಟ್ರೀಸಾ ಜಾಲಿ, ಹಾಕಿ ಆಟಗಾರ್ತಿ ಸಲೀಮಾ ಟೆಟೆ, ಪ್ಯಾರಾ-ಅಥ್ಲೀಟ್ ಶರ್ಮಿಳಾ ಮತ್ತು ಸೈಕ್ಲಿಸ್ಟ್ ಡೇವಿಡ್ ಬೆಕ್‌ಹ್ಯಾಮ್ ಜೊತೆ ಮೋದಿ ಪ್ರತ್ಯೇಕವಾಗಿ ಮಾತನಾಡಿದರು.

ಬರ್ಮಿಂಗ್ ಹ್ಯಾಮ್ ನಲ್ಲಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ ಕಾಮನ್ ವೆಲ್ತ್ 2022 ನಡೆಯಲಿದೆ. ಇದರಲ್ಲಿ 19 ವಿವಿಧ ಕ್ರೀಡೆಗಳು ನಡೆಯಲಿದ್ದು 215 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 141 ಈವೆಂಟ್‌ಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತವು 18 ನೇ ಬಾರಿ ಭಾಗವಹಿಸುತ್ತಿದೆ.