ಕಾರವಾರ: ಆತ್ಮ ಯೋಜನೆಯಡಿ ಕೈಗೊಂಡ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ರೈತರು ಮಾಹಿತಿ ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ತಮ್ಮ ಕ್ಷೇತ್ರ ಮಟ್ಟದಲ್ಲಿ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಆತ್ಮ ಯೋಜನೆಯ 2022-23 ನೇ ಸಾಲಿನ ಅನುಷ್ಠಾನದ ಬಗ್ಗೆ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮುದ್ರ ಪಾಚಿ ಪ್ರಾತ್ಯಕ್ಷಿಕೆಯ ಫಲಶೃತಿ ಹಾಗೂ ಕ್ಷೇತ್ರ ವಿಸ್ತರಣೆ ಮತ್ತು ಸಾಧಕ ಭಾದಕಗಳ ಬಗ್ಗೆ ವರದಿ ನೀಡಬೇಕು ಎಂದು ಮೀನುಗಾರಿಕಾ ಉಪನಿರ್ದೇಶಕರಿಗೆ ಸೂಚಿಸಿದರು.
ಕಳೆದ ಸಾಲಿನಲ್ಲಿ ಕೈಗೊಡ ಅಭಿವೃದ್ಧಿ ಕಾರ್ಯಗಳನ್ನು ಯಾವ ರೀತಿ ನಡೆಸಲಾಗಿತ್ತು ಹಾಗೂ ಈ ಪ್ರಸಕ್ತ ಸಾಲಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಯಾವ ರೀತಿ ಬದಲಾವಣೆಗಳನ್ನು ತರಬಹುದು, ಹಾಗೂ ಇನ್ನೂ ಹೇಗೆಲ್ಲಾ ನವೀಕರಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಬೇಕು ಎಂದು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಭಟ್ಕಳ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಲಾವಂಚ ಬೆಳೆಯುವ ಬಗ್ಗೆ ಹಾಗೂ ತರಬೇತಿಯನ್ನು ಆಯೋಜಿಸಲು ಮತ್ತು ಜಿಲ್ಲೆಯಲ್ಲಿ ನಿರ್ಧಿಷ್ಟ ಬೆಳೆಯ ಉತ್ಪನ್ನ ಆಧಾರಿತ ರೈತ ಮೇಳಗಳನ್ನು ಆಯೋಜಿಸಲು ಸೂಚಿಸಿ, ಪಸ್ತುತ ಸಾಲಿನಲ್ಲಿ ಆತ್ಮ ಯೋಜನೆಯಲ್ಲಿ ಕೈಗೊಳ್ಳಬೇಕಾದ ವಿವಿಧ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಪ್ರಾಜೆಕ್ಟ್ ಆಫೀಸರ್ ಕರೀಮ್ ಆಸಾದಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ವಿಜ್ಞಾನಿಗಳು, ಕದಂಬ ಮಾರ್ಕೆಟಿಂಗ್ ಸೂಸೈಟಿ ವಿಶ್ವೇಶ್ವರ ಭಟ್ಟ, ನಬಾರ್ಡ ವ್ಯವಸ್ಥಾಪಕರು ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.