ಕಾರವಾರ: ಸಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಶನಿವಾರ ಫ್ರೀಡಂ ರನ್@75 ಆಯೋಜಿಸಲಾಗಿತ್ತು. ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರು ಈ ಫ್ರೀಡಂ ರನ್ ಗೆ ಚಾಲನೆ ನೀಡಿ ಮಾತನಾಡಿ ಈ ಫ್ರೀಡಂ ರನ್ ಕಾರ್ಯಕ್ರಮವು ದೈಹಿಕ ಆರೋಗ್ಯದ ಬಗ್ಗೆ ಸಂದೇಶವನ್ನು ಸಾರಲು ಆಯೋಜಿಸಲಾಗಿದೆ ಎಂದರು.
5 ಕಿ.ಮೀ. ಹಾಗೂ 10 ಕಿ.ಮೀ. ಓಟಗಳಾಗಿ ಎರಡು ವಿಭಾಗಗಳಲ್ಲಿ ನೌಕಾನೆಲೆ ಪ್ರದೇಶದೊಳಗೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾರತೀಯ ನೌಕಾಪಡೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಜೊತೆಗೆ ಕಾರವಾರದ ವಿವಿಧ ಕಾಲೇಜುಗಳ 75 ವಿದ್ಯಾರ್ಥಿಗಳು ಸೇರಿ ಒಟ್ಟು 750 ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. 5 ವರ್ಷದ ಮಕ್ಕಳಿಂದ ಹಿಡಿದು 81 ವರ್ಷದ ವೃದ್ಧರವರೆಗೆ ಸ್ಪರ್ಧಾಳುಗಳು ಈ ಓಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಂತಿಮವಾಗಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.