‘ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಿದ್ದೇನೆ’ – ದಿನಕರ ಶೆಟ್ಟಿ

ಕುಮಟಾ: ತಾಲೂಕಿನ ಕಲ್ಲಬ್ಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ದಿನಕರ ಶೆಟ್ಟಿ, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಕಲ್ಲಬ್ಬೆ-ಕುಡವಳ್ಳಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ, ಮೇಲಿನ ಹೊಸಳ್ಳಿ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ. ಹಾಗೂ ಕಂದವಳ್ಳಿ-ಅಜ್ಜಿಗದ್ದೆ ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಗ್ರಾಮೀಣ ಭಾಗಗಳ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಲಾಗಿದ್ದು, ಕಂದವಳ್ಳಿ-ಅಜ್ಜಿಗದ್ದೆ ರಸ್ತೆ ನಿರ್ಮಾಣಕ್ಕೆ ಈ ಭಾಗದ ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದರು. ತಕ್ಷಣ ಸಂಸದ ಅನಂತಕುಮಾರ ಹೆಗಡೆಯವರನ್ನು ಸಂಪರ್ಕಿಸಿ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ ರಸ್ತೆಗೆ 4 ಕೋಟಿ ಹಾಗೂ ಸೇತುವೆ ನಿರ್ಮಾಣಕ್ಕೆ 80 ಲಕ್ಷ ರೂ. ಅನುದಾನ ನೀಡಿ, ಈಗಾಗಲೇ ಸೇತುವೆ ನಿರ್ಮಾಣವಾಗಿದೆ. ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ಭಾಗದ ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಿದ್ದೇನೆ ಎಂಬ ಆತ್ಮತೃಪ್ತಿ ನನ್ನಲ್ಲಿದೆ ಎಂದರು.

ಹಿಂದಿನ ಸರ್ಕಾರ ಕೊನೆಯ ಅವಧಿಯಲ್ಲಿ ತರಾತುರಿಯಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದೆ. ಆದರೆ ಅದಕ್ಕೆ ಅನುದಾನ ಬಿಡುಗಡೆಗೊಳಿಸಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಕಾಮಗಾರಿಗಳಿಗೆ ಅನುದಾನ ನೀಡಿ, ಮುಕ್ತಾಯಗೊಳಿಸುತ್ತಿದ್ದೇವೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಹಿರಿಯ ಮುಖಂಡ ವಿನೋದ ಪ್ರಭು, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ತಾ.ಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಜಿ.ಪಂ ಅಭಿಯಂತರ ಸಂಜು ನಾಯಕ ಸೇರಿದಂತೆ ಮತ್ತಿತರರು ಇದ್ದರು.