ಈ ಬಾರಿಯೂ ಗಣೇಶೋತ್ಸವಕ್ಕೆ ವಿಘ್ನ.! ವಾರ್ಡಿಗೆ ಒಂದೇ ಗಣೇಶ ಕೂರಿಸಬೇಕಂತೆ.! ಬಿಬಿಎಂಪಿ ರೂಲ್ಸ್ ಗೆ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ರೋಶ.!

ಬೆಂಗಳೂರು: ಈ ಬಾರಿಯೂ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಒಂದು ವಾರ್ಡ್ ಗೆ ಒಂದೇ ಗಣೇಶ ಕೂರಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಹೇಳಿದ್ದಾರೆ. ಕಳೆದೆರಡು ವರ್ಷ ಕೊರೋನಾ ಕಾರಣದಿಂದ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿಲಿಕಾನ್ ಸಿಟಿ ಮಂದಿ ಸಿದ್ಧತೆ ಮಾಡಿದ್ದರು. ಈ ಬಾರಿಯೂ ಜನರ ಆಸೆಗೆ ಬಿಬಿಎಂಪಿ ತಣ್ಣೀರೆರಚಿದೆ.

ಇನ್ನು ಬಿಬಿಎಂಪಿ ನಿರ್ಧಾರದ ವಿರುದ್ಧ ಹಿಂದೂಪರ ಸಂಘಟನೆ ಗರಂ ಆಗಿವೆ. ಗಣೇಶೋತ್ಸವಕ್ಕೆ 130 ವರ್ಷಗಳ ಇತಿಹಾಸವಿದೆ. ಬಿಬಿಎಂಪಿ ತನ್ನ ನಿರ್ಧಾರವನ್ನ ಮತ್ತೊಮ್ಮೆ ಪರಿಶೀಲಿಸಬೇಕು. ಇದು ಸಾರ್ವಜನಿಕ ಹಬ್ಬವಾಗಿದ್ದು, ಹಿಂದುಗಳು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಆಗ್ತಿದೆ ಎಂದು ಹಿಂದೂರಪ‌ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಮುಖಂಡರು, ಗಣೇಶ ಮೂರ್ತಿ ತಯಾರಕರ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಬೇಕಿತ್ತು. ಇದು ಏಕಮುಖೀಯ ನಿರ್ಧಾರವಾಗಿದ್ದು ಅತ್ಯಂತ ಖಂಡನೀಯ. ಸರ್ಕಾರ ಈ ನಿರ್ಧಾರದ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಆಗ್ರಹಿಸಿದ್ದಾರೆ.