ಕುಮಟಾ: ತಾಲೂಕಿನ ದೀವಗಿಯ ಚೇತನಾ ಸೇವಾ ಸಂಸ್ಥೆ ಹಾಗೂ ಮಿರ್ಜಾನದ ಆದಿಚುಂಚನಗಿರಿ ಕೇಂದ್ರೀಯ ವಿದ್ಯಾಲಯದ ಸಹಯೋಗದೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸ್ವರ್ಣಿಮ ಭಾರತದೆಡೆಗೆ ಎನ್ನುವ ಕಾರ್ಯಕ್ರಮ ಮಿರ್ಜಾನದ ಆದಿಚುಂಚನಗಿರಿ ವಿದ್ಯಾಲಯದಲ್ಲಿ ನಡೆಯಿತು.
ಸ್ವರ್ಣಿಮ ಭಾರತದ ಸಂದೇಶ ನೀಡಿ ಸತ್ಯ ಗೀತಾ ಜ್ಞಾನಯೋಗ ಅಧ್ಯಯನ ಕೇಂದ್ರದ ಪ್ರವಚನಕಾರ್ತಿ ಎ.ಆರ್.ಭಾರತಿ ಮಾತನಾಡಿ, ಹೇಗೆ ವಾರದ ಚಕ್ರ ತಿರುಗುತ್ತದೋ, ತಿಂಗಳ ಚಕ್ರ ತಿರುಗುತ್ತದೋ ಹಾಗೆಯೇ ಯುಗಗಳ ಚಕ್ರ ಕೂಡ ತಿರುಗುತ್ತದೆ. ಅದರ ಪ್ರಕಾರವಾಗಿ ನಾವೆಲ್ಲರೂ ಕಲಿಯುಗದ ಫೋರ ಅಂಧಕಾರದಲ್ಲಿದ್ದೇವೆ ಎನ್ನುವುದ ಪ್ರತಿಯೊಬ್ಬರೂ ಒಪ್ಪಿಕೊಳ್ಳುವಂಥದ್ದು. ಕಲಿಯುಗ ಮುಗಿದ ಮೇಲೆ ಖಂಡಿತ ಸತ್ಯಯುಗ ಅಥವಾ ಸ್ವರ್ಣಿಮ ಯುಗ ಬಂದೇ ಬರುತ್ತದೆ ಇದು ಸತ್ಯ. ಅದಕ್ಕಾಗಿ ಸತ್ಯಯುಗದಲ್ಲಿ ಪಾತ್ರ ಮಾಡಲು ನಾವು ಯೋಗ್ಯರಾಗಬೇಕಾದರೆ ಪಾರಮಾರ್ಥಿಕ ಜ್ಞಾನದ ಮೂಲಕ ಸತ್ಯ ಪರಮಾತ್ಮನ ಪರಿಚಯ ಪಡೆದುಕೊಂಡು ಸಂಬಂಧ ಬೆಳೆಸಿದಾಗ ನಮ್ಮಲ್ಲಿ ದೈವೀ ಗುಣಗಳು ಬಂದು ನಮ್ಮಲ್ಲಿರುವ ಅವಗುಣಗಳು ದೂರಾಗುತ್ತದೆ. ಹೀಗಾದಾಗ ಮಾತ್ರ ನಾವು ಪುನಃ ಭಾರತವನ್ನು ಸ್ವರ್ಣಿಮ ಭಾರತವನ್ನಾಗಿ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಂಗವಾಗಿ ದೇಶ ಸೇವೆ ಮಾಡಿದ ನಿವೃತ್ತ ಸೈನಿಕರಾದ ಮಿರ್ಜಾನದ ಗಣೇಶ ನಾಯ್ಕ ಹಾಗೂ ಎಮ್.ಆರ್.ಗಿರೀಶ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತೃಭೂಮಿಗಾಗಿ ಪ್ರತಿಜ್ಞೆಯನ್ನು ಮಾಡಿಸಲಾಯಿತು.