ಸಿದ್ದಾಪುರ: ಗಣೇಶ ಚತುರ್ಥಿ ಸಂಭ್ರಮದಲ್ಲಿದ್ದ ತಾಲೂಕಿನ ಜನತೆಗೆ ಬುಧವಾರ ಸಂಜೆಯಿಂದ ಸುರಿದ ಭಾರಿಯಿಂದ ಕೆಲ ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ವಿದ್ಯುತ್ ಇಲ್ಲದೇ ಪರದಾಡಿದರು. ಬುಧವಾರ ಸಂಜೆಯಿಂದ ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಸಿದ್ದಾಪುರ ಪಟ್ಟಣದ ಹಲವೆಡೆ ಅನಾಹುತ ಸಂಭವಿಸಿದೆ.
ಬಸ್ ನಿಲ್ದಾಣದ ಎದುರಿನ ರಾಮಕೃಷ್ಣ ಹೆಗಡೆ ವೃತ್ತದ ರಾಜ್ ಕಾಲುವೆಯ ಅಸಮರ್ಪಕ ಕಾಮಗಾರಿಯ ಕಾರಣ ಪಕ್ಕದ ಮನೆಗಳ ಒಳಗೆ, ಹಿತ್ತಲಿಗೆ ಕೊಳಚೆ ನೀರು ನುಗ್ಗಿ ಹಬ್ಬ ಆಚರಣೆಯಲ್ಲಿದ್ದ ಮನೆ ಮಂದಿಗೆ ನೀರು ಹೊರ ಹಾಕುವುದೇ ಸವಾಲಾಗಿತ್ತು. ಇಂದಿರಾ ನಗರದ ಗಟಾರದ ನೀರು ನುಗ್ಗಿ ರಸ್ತೆ ಕೊರೆದುಕೊಂಡು ಜೈರಾಮ ನಾಯ್ಕ ಎನ್ನುವವರ ಕೌಪಂಡ್ ಒಳಗೆ ನುಗ್ಗಿ ಕೌಪಂಡ್ ಗೋಡೆ ಕುಸಿದಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ರವಿಕುಮಾರ್ ಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಬ್ಬರದ ಮಳೆ ಹಾಗೂ ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸಿದ್ದಾಪುರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕರೆಂಟ್ ಇಲ್ಲದೇ ಸಾರ್ವಜನಿಕರು ಪರದಾಟ ನಡೆಸಿದರು.