ಗಣೇಶೋತ್ಸವ ಆಚರಣೆಗೆ ಸಜ್ಜಾಗುತ್ತಿರುವ ಕಾರವಾರ: ಗಣಪನ ಆಗಮನಕ್ಕೆ ಕ್ಷಣಗಣನೆ

ಕಾರವಾರ: ವಿಘ್ನ ನಿವಾರಕ ಗಣಪತಿಯನ್ನು ಆರಾಧಿಸುವ ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇದ್ದು, ಕಳೆದೆರಡು ವರ್ಷಗಳಲ್ಲಿ ಸರಳವಾಗಿ ನಡೆದಿದ್ದ ಉತ್ಸವವನ್ನು ಈ ವರ್ಷ ಅದ್ಧೂರಿಯಾಗಿ ನಡೆಸಲು ಕಾರವಾರ ಸಿದ್ಧವಾಗಿದೆ.

ಕೊರೋನಾದಿಂದಾಗಿ 2 ವರ್ಷ ಗಣೇಶ ಹಬ್ಬ ಸರಳವಾಗಿ ನಡೆದು ಜನರಲ್ಲಿ ಬೇಸರ ಉಂಟು ಮಾಡಿತ್ತು. ಆದರೆ ಈ ಬಾರಿ ಸರಕಾರವು ಗಣೇಶ ಹಬ್ಬವನ್ನು ಆಚರಿಸಲು ಯಾವುದೇ ನಿರ್ಬಂಧವನ್ನು ವಿಧಿಸದಿರುವ ಕಾರಣ ಜನರು ಖುಷಿಯಿಂದ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.

ಮನೆಗಳಲ್ಲಿ ಪೂಜಿಸಲು ನೂರಾರು ಸಂಖ್ಯೆಯಲ್ಲಿ ಅಂದವಾದ ಬಣ್ಣಗಳಲ್ಲಿ ಗಣಪತಿಯ ಮೂರ್ತಿಗಳು ಸಿದ್ಧಗೊಂಡಿವೆ. ಸ್ಥಳೀಯ ಮೂರ್ತಿ ತಯಾರಕರು ತಿಂಗಳುಗಳ ಹಿಂದಿನಿಂದಲೇ ಮೂರ್ತಿಗಳ ಸಿದ್ಧತೆಯಲ್ಲಿ ತೊಡಗಿದ್ದು ಬಹುತೇಕ ಎಲ್ಲ ಮೂರ್ತಿಗಳಿಗೆ ಅಂತಿಮ ಸ್ಪರ್ಶವನ್ನು ನೀಡಿದ್ದಾರೆ. ಇನ್ನು ತಾಲೂಕಿನ ಸುಮಾರು 20 ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ನಡೆಸಲಾಗುತ್ತಿದ್ದು ದೊಡ್ಡ ದೊಡ್ಡ ಗಾತ್ರದ ವಿವಿಧ ಭಂಗಿಯ ಗಣೇಶನ ವಿಗ್ರಹಗಳು ಸಿದ್ಧಗೊಂಡಿದ್ದು ಕಲಾಕಾರರು ಅವುಗಳಿಗೆ ಅಂತಿಮ ಸ್ಪರ್ಶವನ್ನು ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಬಾರಿ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ ಕೂಡ ಬಂದಿದೆ ಎಂದು ಕಳೆದ 40 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಘನಶ್ಯಾಮ ನಾಯ್ಕ ಹೇಳಿದರು.

ಕಾಡು ಹೂ, ಕಾಯಿಗಳ ವ್ಯಾಪಾರ ಜೋರು.!

ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವವರು ಮನೆ, ಮಂಟಪದ ಅಲಂಕಾರಕ್ಕಾಗಿ ಕಾಡಿನ ವಿವಿಧ ರೀತಿಯ ಹೂ, ಕಾಯಿಗಳನ್ನು ಬಳುಸುವುದು ವಿಶೇಷವಾಗಿದೆ. ಇದರಿಂದಾಗಿ ಭಾನುವಾರದಿಂದಲೇ ಸ್ಥಳೀಯ ಹಳ್ಳಿಗಳ ಮಹಿಳೆಯರು ಕಾಡಿನಿಂದ ತಂದ ವಿವಿಧ ರೀತಿಯ ಹೂವುಗಳು, ಮಲ್ಲೆ ಕಾಯಿ, ಮತ್ತಿ ಕಾಯಿ, ಗರಿಕೆ ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಮುಗಿ ಬಿದ್ದು ಖರೀದಿಸುತ್ತಿದ್ದಾರೆ. ಇನ್ನು ಪ್ಲಾಸ್ಟಿಕ್, ಬಣ್ಣದ ಕಾಗದಗಳಿಂದ ತಯಾರಿಸಿದ ವಿವಿಧ ಅಲಂಕಾರಿಕ ವಸ್ತುಗಳು, ವಿದ್ಯುದ್ದೀಪಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ. ಇದರೊಂದಿಗೆ ಗಣಪನ ಪೂಜೆಗೆ ಅಗತ್ಯವಾದ ವಾದ್ಯದ ಸಾಮಗ್ರಿಗಳಾದ ಗುಮ್ಮಟೆ ಪಾಂಗ್ ಹಾಗೂ ಸಣ್ಣ ಚಂಡೆಗಳ ಮಾರಾಟವೂ ಜೋರಾಗಿದೆ.

ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿರುವ ಕಾರವಾರ.!

ನಗರದಲ್ಲಿ 10 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವಗಳು ನಡೆಯುತ್ತವೆ. ಇನ್ನು ನಗರದ ಸಿದ್ಧಿ ವಿನಾಯಕ ಮಂದಿರಲ್ಲಿಯೂ ಗಣೇಶ ಚತುರ್ಥಿಯಿಂದ 11 ದಿನಗಳ ವರೆಗೆ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದ ಎದುರಿನ ಎಲ್ಲ ಕಟ್ಟಡಗಳಿಗೂ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ತಾಲೂಕಿನ ಶಿರವಾಡ, ಸದಾಶಿವಗಡ, ಶಿವಾಜಿ ಚೌಕ, ಮಾಜಾಳಿ, ಅಂಗಡಿ, ಮುಡಗೇರಿ, ಕದ್ರಾ, ಮಲ್ಲಾಪುರ, ಕೆರವಡಿ, ಅಮದಳ್ಳಿಗಳಲ್ಲಿಯೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅದ್ಧೂರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮಂಗಳವಾರ ಗೌರಿ ಹಬ್ಬವಿದ್ದು ಬುಧವಾರ ಗಣೇಶನ ಆಗಮನವಾಗಲಿದೆ. ಒಟ್ಟಿನಲ್ಲಿ ಈ ಬಾರಿ ಅದ್ಧೂರಿ ಉತ್ಸವಕ್ಕೆ ತಾಲೂಕು ಸಜ್ಜಾಗಿದ್ದು ಸಾರ್ವಜನಿಕರು ಖುಷಿಯಿಂದ ಭಕ್ತಿ ಪೂರ್ವಕವಾಗಿ ಗಣೇಶನನ್ನು ಸ್ವಾಗತಿಸಲು ಕಾಯುತ್ತಿದ್ದಾರೆ.