ಶಿರಸಿ: ಕಲಾವಿದ ಮತ್ತು ಕೃತಿಕಾರನಿಗೆ ಸಂಸ್ಕೃತದ ಅರಿವು, ಯಕ್ಷಗಾನ ಕಲೆಗೆ ಪುಷ್ಠಿ ನೀಡುತ್ತದೆ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಸ್ವರ್ಣವಲ್ಲಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಯಕ್ಷೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.
ಯಕ್ಷಗಾನ ಕೃತಿಕಾರ ಹೊಸ್ತೋಟ ಮಂಜುನಾಥ ಭಾಗವತರ ಸಾಧನೆಯೇ ಶ್ರೇಷ್ಠವಾದುದು. ಒಬ್ಬ ವ್ಯಕ್ತಿ ಯಕ್ಷಗಾನದ ಬಗ್ಗೆ ಎಷ್ಟೆಲ್ಲ ಕೊಡುಗೆ ನೀಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಯಕ್ಷಗಾನಕ್ಕಾಗಿ ತನ್ನನ್ನು ತಾವು ಸಂಪೂರ್ಣ ಸಮರ್ಯಣೆ ಮಾಡಿಕೊಂಡಿದ್ದರು ಎಂದರು.
ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನಾ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಹಿಂದಿನ ಕಾಲದಲ್ಲಿ ರಾಜರು ಕಲೆಗೆ ಪ್ರೋತ್ಸಾಹ, ಆಶ್ರಯ ನೀಡುತ್ತಿದ್ದರು. ಆದರೆ, ಈಗಿನ ಸರ್ಕಾರ ವ್ಯವಸ್ಥೆಯಲ್ಲಿ ಆ ಮಾನ್ಯತೆ ಸಿಗುತ್ತಿಲ್ಲ. ಯಕ್ಷಗಾನಕ್ಕೆ ಸ್ವರ್ಣವಲ್ಲೀ ಸಂಸ್ಥಾನ ಆಶ್ರಯ ನೀಡಿ ಈ ಕೊರತೆ ನೀಗಿಸಿದೆ ಎಂದರು.
ಪ್ರಸಿದ್ಧ ಭಾಗವತ ವಿ.ಗಣಪತಿ ಭಟ್ ಮೊಟ್ಟೆಗದ್ದೆ ಅವರಿಗೆ ದಿ. ಹೊಸ್ತೋಟ ಮಂಜುನಾಥ ಭಾಗವತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ಗಣಪತಿ ಭಟ್ ಮಾತಣಾಡಿ, ಗುರು ಉಪದೇಶವಿಲ್ಲದ ಜ್ಞಾನ, ಯೋಗ ನಿಷ್ಪ್ರಯೋಜಕ. ಶಾಸ್ತ್ರಾಧ್ಯಯನ ಮಾಡಲು ಸಾಧ್ಯವಾಗದಿದ್ದರೆ ಒಳ್ಳೆಯ ಗುರುವನ್ನಾದರೂ ಹೊಂದಬೇಕು ಎಂದರು.
ಹೊಸ್ತೋಟ ಭಾಗವತರು ಒಬ್ಬ ಶ್ರೇಷ್ಠ ಕವಿಯಾಗಿದ್ದರು. ಅವರಲ್ಲಿ ಒಬ್ಬ ಸಮರ್ಥ ಯಕ್ಷಗಾನದ ಅರ್ಥಧಾರಿ, ಪಾತ್ರಧಾರಿ, ಗುರು ಇದ್ದ. ಹೊಸ್ತೋಟರು ಕಲೆಗಾಗಿ ತಮ್ಮ ಬದುಕನ್ನು ಸವೆಸಿಕೊಂಡ ಒಬ್ಬ ತಪಸ್ವಿಯಾಗಿದ್ದರು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಸ್ ಹೆಗಡೆ, ಆರ್ ಎಸ್ ಹೆಗಡೆ, ನಾಗರಾಜ ಜೋಶಿ ಸೋಂದಾ ಇತರರಿದ್ದರು.