ನಗರಸಭೆ ಗಮನಕ್ಕೆ ತರದೇ ಮಳಿಗೆ ಕಾಯ್ದಿರಿಸಿದ ಬಗ್ಗೆ ಸದಸ್ಯರ ಅಸಮಾಧಾನ: ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾದ ಸಾಮಾನ್ಯ ಸಭೆ

ಶಿರಸಿ: ನಗರಸಭೆಯ ಗಮನಕ್ಕೆ ತರದೇ ಐಡಿಎಸ್ಎಂಟಿ 27 ಮಳಿಗೆಗಳಲ್ಲಿ 6 ಮಳಿಗೆಗಳನ್ನು ಜಿಲ್ಲಾಧಿಕಾರಿಗಳು ಕಾಯ್ದಿರಿಸಿದ್ದಾರೆ ಎಂದು ಆರೋಪಿಸಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆಯಿತು.

ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಈ ವಿಷಯ ಚರ್ಚೆಗೆ ಬಂತು. ಪೌರಾಯುಕ್ತ ಕೇಶವ ಚೌಗುಲೆ ಜಿಲ್ಲಾಧಿಕಾರಿಗಳ ಆದೇಶದಂತೆ 27 ಮಳಿಗೆಗಳಲ್ಲಿ ನಾಲ್ಕು ಪ. ಜಾ. ಗೆ, ಒಂದು ಪ.ಪಂ. ಕ್ಕೆ ಹಾಗು ಒಂದನ್ನು ಅಂಗವಿಕಲರಿಗಾಗಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದರಿಂದ ಕೆರಳಿದ ವಿರೋದ ಪಕ್ಷದ ಸದಸ್ಯ ಖಾದರ್ ಅನವಟ್ಟಿ, ಮಳಿಗೆಗಳನ್ನು ಕಾಯ್ದಿರಿಸಿದ್ದರ ಬಗ್ಗೆ ನಮಗೆ ಬೇಸರವಿಲ್ಲ. ಆದರೆ ಸದಸ್ಯರ ಗಮನಕ್ಕಾಗಲಿ ಇಲ್ಲವೇ ಅಧ್ಯಕ್ಷರ ಗಮನಕ್ಕೆ ತರದೇ ರಿಸರ್ವ್ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು. ಇವರ ಧ್ವನಿಗೆ ವಿರೋದ ಪಕ್ಷದ ಸದಸ್ಯರು ಕೂಡಾ ಧ್ವನಿಗೂಡಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಸದಸ್ಯ ಶ್ರೀಕಾಂತ ತಾರಿಬಾಗಿಲು, ಮಳಿಗೆಗಳನ್ನು ಕಾಯ್ದಿರಿಸುವುದಾದರೆ ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದೇ ಮಾಡಬೇಕು‌. ಮಳಿಗೆ ಕಾಯ್ದಿರಿಸುವ ಅದಿಕಾರ ಪೌರಾಯುಕ್ತರಿಗೂ ಇಲ್ಲ, ಜಿಲ್ಲಾಧಿಕಾರಿಗಳಿಗೂ ಇಲ್ಲ. ಒಂದು ವೇಳೆ ಜಿಲ್ಲಾಧಿಕಾರಿಗಳು ರಿಸರ್ವ್ ಮಾಡಲು ಸೂಚನೆ ನೀಡಿದ್ದರೆ ಸದಸ್ಯರ ಗಮನಕ್ಕೆ ಅಥವಾ ಕೊನೆ ಪಕ್ಷ ಅಧ್ಯಕ್ಷರ ಗಮನಕ್ಕೆ ತಂದೇ ಮಾಡಬೇಕಿತ್ತು ಎಂದು ಪೌರಾಯುಕ್ತರಿಗೆ ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷರ ಗಮನಕ್ಕೆ ತರದೆ 6 ಮಳಿಗೆಗಳನ್ನು ರಿಸರ್ವ್ ಮಾಡಿರುವ ಕ್ರಮದ ಬಗ್ಗೆ ಸದಸ್ಯರುಗಳಾದ ನಾಗರಾಜ ನಾಯ್ಕ,ರಮಾನಂದ ಭಟ್ ಪೌರಾಯುಕ್ತರನ್ನು ಪ್ರಶ್ನಿಸಿದರು. ಇದರಿಂದ ಕೋಪಗೊಂಡ ಅಧ್ಯಕ್ಷ ಗಣಪತಿ ನಾಯ್ಕ ಮಳಿಗೆ ರಿಸರ್ವ್ ಮಾಡಿರುವ ವಿಷಯ ನನಗೂ ಗೊತ್ತಿಲ್ಲ. ಇದರಲ್ಲಿ ನನ್ನದೇನೂ ಪಾತ್ರವಿಲ್ಲ ಎಂದು ಸ್ಪಷ್ಟನೆ ನೀಡಿದರು. ಬಳಿಕ ಪೌರಾಯುಕ್ತರು ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವದಾಗಿ ಹೇಳಿದ್ದರಿಂದ ಮಳಿಗೆ ಕಾಯ್ದಿರಿಸಿದ ವಿಷಯ ಮುಕ್ತಾಯಗೊಳಿಸಿದರು.

ನಗರಸಭೆಯಲ್ಲಿ ಸದಸ್ಯರ ಮಾತಿಗೆ ಕಿಮ್ಮತ್ತಿಲ್ಲ. ಸಾರ್ವಜನಿಕರು ಅನ್ ಲೈನ್ ನಲ್ಲಿ ದೂರು ಹಾಕಿದರೇ ಸಾಕು ಕೂಡಲೇ ಬಂದು ಸ್ಪಂದಿಸುತ್ತಾರೆ. ಆದರೆ ಸದಸ್ಯರು ವಾರ್ಡಿನ ದೂರನ್ನು ದೂರವಾಣಿ ಮೂಲಕ ತಿಳಿಸಿದರೂ ಕವಡೆ ಕಾಸಿನ ಕಿಮ್ನತ್ತಿಲ್ಲವೆಂದು ವನಿತಾ ಶೆಟ್ಟಿ ಹಾಗು ಖಾದರ ಅನವಟ್ಟಿ ಅದ್ಯಕ್ಷರಿಗೆ ಹಾಗೂ ಪೌರಾಯುಕ್ತರನ್ನು ತರಾಟಗೆ ತೆಗೆದುಕೊಂಡರು.

ಗಣೇಶನನ ಹಬ್ಬ ಬಂದರೂ ನಗರದಲ್ಲಿ ಸ್ವಚ್ಚತೆ ಕೆಲಸ ಆಗದಿರುವ ಬಗ್ಗೆ ಪ್ರದೀಪ ಶೆಟ್ಟಿ ಹಾಗು ಪ್ರಾನ್ಸಿಸ್ ಫರ್ನಾಂಡೀಸ್ ಆಕ್ರೋಶಗೊಂಡರು. ವಾರ್ಡ ಸ್ವಚ್ಚತೆಯ ಬಗ್ಗೆ ಸಂಬಂದಪಟ್ಟ ಅದಿಕಾರಿಗಳಿಗೆ ಪೋನ್ ಮಾಡಿದರೂ ಸೌಜನ್ಯಕ್ಕಾದರೂ ಪೋನ್ ಎತ್ತುವದಿಲ್ಲ. ಚೌತಿ ಹಬ್ಬ ಹತ್ತಿರವಿದ್ದರೂ ವಾರ್ಡನಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯುವ ಕೆಲಸವಾಗುತ್ತಿಲ್ಲ ಎಂದಹ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ಉಪಾದ್ಯಕ್ಷೆ ವೀಣಾ ಶೆಟ್ಟಿ ಹಾಗು ಸ್ಥಾಯಿ ಸಮಿತಿ ಅದ್ಯಕ್ಷ ಆನಂದ ಸಾಲೇರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.