ಮೊಬೈಲ್ ನಿಂದ ದೂರವಿದ್ದು, ಓದಿನ ಕಡೆ ಗಮನಕೊಡಿ – ಶಾಸಕ ದಿನಕರ ಶೆಟ್ಟಿ

ಹೊನ್ನಾವರ : ಇಂದಿನ ದಿನಮಾನಗಳಲ್ಲಿ ಮೊಬೈಲ್ ನ ಸದ್ಭಳಕೆ ಬದಲು ದುರ್ಬಳಕೆಯಾಗುವುದೇ ಹೆಚ್ಚುತ್ತಿದೆ, ಇದರಿಂದ ದೂರ ಇದ್ದು ಓದಿನೆಡೆ ಹೆಚ್ಚಿನ ಗಮನಹರಿಸಿ ಎಂದು ಶಾಸಕ ದಿನಕರ ಶೆಟ್ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವಾರದಲ್ಲಿ ಸೋಮವಾರ ನಡೆದ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಎನ್.ಸಿ.ಸಿ, ರೆಂಜರ್ಸ್ ಹಾಗೂ ರೋವರ್ಸ, ರೆಡ್ ಕ್ರಾಸ್ ಘಟಕಗಳ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಂತಹ ಕಾರ್ಯ ಕಾಲೇಜಿನಿಂದ ನಡೆದಿದೆ.ಹೊನ್ನಾವರ ಎನ್ನುವುದು ಬುದ್ದಿವಂತರ ನಾಡಾಗಿದೆ. ಅದಕ್ಕೆ ತಕ್ಕಂತೆ ನಿಮ್ಮ ಸಾಧನೆಯು ಇರಲಿ. ವಿದ್ಯಾರ್ಥಿಗಳು ದೇಶಾಭಿಮಾನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ನಿವೃತ್ತ ಸೈನಿಕ ತಿಮ್ಮಪ್ಪ ಗೌಡ ಸನ್ಮಾನ ಸ್ವೀಕರಿಸಿ, ಇಂದು ಜಾತಿ, ಮತ ಎಂಬ ವಿರೋಧ ಭಾವಗಳು ಉದ್ಭವವಾಗುತ್ತಿದೆ. ಇಂದಿನ ಯುವಜನಾಂಗ ಇದೆಲ್ಲವನ್ನು ವಿರೋಧಿಸಿ ನಾವೆಲ್ಲಾ ಒಂದು ಎನ್ನುವ ಮೂಲಕ ರಾಷ್ಟ್ರಾಭಿಮಾನ ಹೊಂದಬೇಕು ಎಂದರು. ಅಲ್ಲದೇ ಸೈನ್ಯಕ್ಕೆ ಸೇರಲು ಕೇಂದ್ರ ಸರ್ಕಾರ ಅಗ್ನಿಪಥ್ ಎನ್ನುವ ಅವಕಾಶ ಒದಗಿಸಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕರೆನೀಡಿದರು.

ನಿವೃತ್ತ ಪ್ರಾಂಶುಪಾಲ ವಿ.ಎಸ್. ಭಟ್ , ಇಂದು ಸರ್ಕಾರಿ ಕಾಲೇಜಿನಲ್ಲಿ ಸಕಲ ಸೌಲಭ್ಯಗಳು ಒದಗಿದೆ‌.ವಿದ್ಯಾರ್ಥಿಗಳು ಇದನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಜನೆಯಲ್ಲಿ ತೊಡಗಿ ಸಾಧನೆ ಮಾಡಿ ಎಂದು ಕರೆ ನೀಡಿದರು.

ಪಠ್ಯ, ಕ್ರೀಡೆ, ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆಯ ಮೂಲಕ ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ನಾಗೇಶ ಶೆಟ್ಟಿ, ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ನಿಶಾ ಶೇಟ್, ಸಿ.ಡಿ.ಸಿ ಸದಸ್ಯರಾದ ಎಂ.ಎಸ್.ಹೆಗಡೆ ಕಣ್ಣಿ, ಸುರೇಶ ಶೆಟ್ಟಿ, ಗಣೇಶ ಪೈ, ವಿದ್ಯಾರ್ಥಿ ಪ್ರತಿನಿಧಿ ಸಚೀನ ನಾಯ್ಕ, ಭಾಗ್ಯಶ್ರೀ ಕರ್ಕಿಕರ್ ಉಪಸ್ಥಿತರಿದ್ದರು.