ಪರಹಿತಕ್ಕಾಗಿ ಸ್ವಹಿತ ತ್ಯಾಗ ಮಾಡೋಣ: ರಾಘವೇಶ್ವರ ಶ್ರೀ ಕರೆ

ಗೋಕರ್ಣ: ಪ್ರೇಮ ಇದ್ದಲ್ಲಿ ಕರುಣೆ ಇರುತ್ತದೆ. ನಮ್ಮ ಹಿತವನ್ನು ತ್ಯಾಗ ಮಾಡಿಯಾದರೂ, ಪರರ ಕಷ್ಟಕ್ಕೆ ಸ್ಪಂದಿಸಬೇಕು. ಇಂಥ ಗುಣಗಳನ್ನು ಪ್ರಾಣಿ, ಪಕ್ಷಿಗಳಿಂದ, ಲೋಕನಾಯಕ ಶಿವನಿಂದ ಪಡೆಯೋಣ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಪ್ರೇಮ ಹಾಗೂ ಕರುಣೆ ಪತಿ-ಪತ್ನಿ ಇದ್ದಂತೆ. ಜಗತ್ತಿನ ಮೇಲೆ ಪ್ರೀತಿ ಇಟ್ಟಿರುವ ಭಗವಂತ ಅಂಥ ಕರುಣೆಯನ್ನು ಜಗತ್ತಿನ ಎಲ್ಲ ಜೀವ ಜಂತುಗಳ ಮೇಲೆ ಹೊಂದಿರುತ್ತಾನೆ. ಇನ್ನೊಬ್ಬರ ಕಷ್ಟ ಪರಿಹಾರ ಮಾಡುವ ಸಲುವಾಗಿ ತಾವೇ ಸಂಕಷ್ಟವನ್ನು ತೆಗೆದುಕೊಳ್ಳುವವರು ಸತ್ಪುರುಷರು ಎಂದು ಬಣ್ಣಿಸಿದರು.

ಅಮೆರಿಕದ ಯೆಲ್ಲೋಸ್ಟೋನ್ ನ್ಯಾಷನಲ್ ಫಾರೆಸ್ಟ್ ನಲ್ಲಿ ಕಾಡ್ಗಿಚ್ಚು ಹರಡಿದ ವೇಳೆ ಮರಗಿಡಗಳು, ಬಳ್ಳಿ, ಪ್ರಾಣಿ ಪಕ್ಷಿಗಳು ಸೇರಿದಂತೆ ಕ್ರಿಮಿಕೀಟಗಳು ಜೀವಂತ ಸಮಾಧಿಯಾದವು. ಅದರ ನಷ್ಟ ಅಂದಾಜಿಸಲು ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳುತ್ತಿರುವಾಗ ಸುಟ್ಟು ಕರಕಲಾದ ಪಕ್ಷಿಯ ಬೂದಿ ಅವರಿಗೆ ಪಕ್ಷಿಯ ಆಕೃತಿಯಲ್ಲೇ ಕಾಣುತ್ತದೆ. ಆ ಪಕ್ಷಿಯನ್ನು ನೋಡಿದಾಗ ತನ್ನ ರೆಕ್ಕೆ ಬಿಚ್ಚಿಟ್ಟುಕೊಂಡ ಭಂಗಿಯಲ್ಲೇ ಅದು ಭಸ್ಮವಾಗಿದ್ದವು. ಅದನ್ನು ಪರಾಂಬರಿಸಿ ನೋಡಿದಾಗ ಮೂರು ಪುಟ್ಟ ಮರಿಗಳು ಹೊರಗೆ ಬಂದವು. ಪರಿಸ್ಥಿತಿ ವೀಕ್ಷಿಸಿದಾಗ ಅಧಿಕಾರಿಗಳು ಧಾರಾಕಾರವಾಗಿ ಕಣ್ಣೀರು ಸುರಿಸಿದರು. ಕಾಳ್ಗಿಚ್ಚಿನ ಬೆಂಕಿ ಮತ್ತು ಹೊಗೆಯಿಂದ ತನ್ನ ಪುಟ್ಟ ಮರಿಗಳನ್ನು ರಕ್ಷಿಸುವ ಸಲುವಾಗಿ ಮರಿಗಳನ್ನು ಗುಂಪು ಸೇರಿಸಿ, ತನ್ನ ರೆಕ್ಕೆ ಹರಡಿ ಅದರ ಅಡಿಯಲ್ಲಿ ಮರಿಗಳನ್ನು ರಕ್ಷಿಸಿತ್ತು. ಬೆಂಕಿ ಬೆಂಕಿಯ ಝಳಕ್ಕೆ ಸುಟ್ಟು ಕರಕಲಾದಾಗಲೂ ತಾನು ಸ್ವಲ್ಪವೂ ಸರಿಯದೇ ಮರಿಗಳನ್ನು ಸುರಕ್ಷಿತವಾಗಿ ಕಾಪಾಡಿತ್ತು. ಮರಿಗಳ ಬಗೆಗಿನ ತಾಯಿಪಕ್ಷಿಯ ಕರುಣೆಯ ಪರಿ ಅಂಥದ್ದು ಎಂದು ಬಣ್ಣಿಸಿದರು.

ಇಂಥದ್ದೇ ಕಥೆ ರಾಮಾಯಣದಲ್ಲೂ ಕಂಡುಬರುತ್ತದೆ. ಅರುಣನ ಮಕ್ಕಳಾದ ಸಂಪಾತಿ ಮತ್ತು ಜಟಾಯು ಇಬ್ಬರೂ ಪಕ್ಷಿರಾಜರು. ಇಬ್ಬರಲ್ಲೂ ಒಮ್ಮೆ ಸ್ಪರ್ಧೆ ಹುಟ್ಟಿ ಹೆಚ್ಚು ವೇಗ ಹಾಗೂ ದೂರವಾಗಿ ಹಾರುತ್ತಾರೆ ಎಂಬ ಪೈಪೋಟಿ ಏರ್ಪಟ್ಟಿತು. ಅಸ್ತ ಪರ್ವತದ ವರೆಗೆ ಸೂರ್ಯನನ್ನು ಹಿಂಬಾಲಿಸುವ ಪಂಥಾಹ್ವಾನದಂತೆ ಇಬ್ಬರೂ ಮುಗಿಲು ದಾಟಿ ಬಾನೆತ್ತರಕ್ಕೆ ಹಾರುತ್ತವೆ. ಆಗ ಸೂರ್ಯರಶ್ಮಿಗಳು ಇಬ್ಬರನ್ನೂ ಸುಡಲು ಆರಂಭಿಸಿತು. ಸಹಿಸಲಸಾಧ್ಯ ಝಳದ ಸ್ಥಿತಿಯಲ್ಲಿ ಸಂಪಾತಿ ಕಣ್ಣು ಬಿಟ್ಟು ನೋಡಿದಾಗ ಜಟಾಯುವಿಗೆ ಹಾರಲು ಸಾಧ್ಯವಾಗಲಿಲ್ಲ. ತಮ್ಮ ಕೆಳಕ್ಕೆ ಬೀಳುತ್ತಿರುವುದು ನೋಡಿದಾಗ ಅಣ್ಣ ಸಂಪಾತಿ ತನ್ನ ರೆಕ್ಕೆಗಳಿಂದ ಆತನನ್ನು ಮುಚ್ಚಿಸಿ ರಕ್ಷಿಸಿದ ಎನ್ನುವ ಉಲ್ಲೇಖ ರಾಮಾಯಣದಲ್ಲಿದೆ. ತಮ್ಮನನ್ನು ರಕ್ಷಿಸುವ ಸಲುವಾಗಿ ಅಣ್ಣ ತನ್ನ ರೆಕ್ಕೆ ಸುಟ್ಟುಕೊಳ್ಳುತ್ತಾನೆ ಎಂದು ವಿವರಿಸಿದರು.

ದುರ್ಗಂಧಯುಕ್ತ ಗೊಬ್ಬರ ಸೇವಿಸುವ ಮರ ಗಿಡಗಳು ನಮಗೆ ನೀಡುವ ಫಲ ರುಚಿಯುಕ್ತ ಪರಿಮಳದ ಹಣ್ಣನ್ನು ನೀಡುತ್ತದೆ. ಆದರೆ ನರ, ಮರದಂತಿಲ್ಲ. ವೈಜ್ಞಾನಿಕವಾಗಿ ನೋಡಿದರೂ, ಇಂಗಾಲದ ಡೈಆಕ್ಸೈಡ್ ಸೇವಿಸಿ ಅಮೃತಮಯವಾದ ಶುದ್ಧ ಆಮ್ಲಜನಕವನ್ನು ನೀಡುತ್ತವೆ. ಆದರೆ ಮನುಷ್ಯ ಶುದ್ಧ ಗಾಳಿ ಸೇವಿಸಿ, ವಿಷಯುಕ್ತ ಗಾಳಿಯನ್ನು ಹೊರ ಸೂಸುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.

ಕಾರವಾರ ಶಾಸಕಿ ರೂಪಾಲಿ ನಾಯ್ಕ ಸೋಮವಾರ ಗೋಕರ್ಣದ ಅಶೋಕೆಗೆ ತೆರಳಿ ಶ್ರೀ ರಾಘವೇಶ್ವರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.