ಭಟ್ಕಳ: ಕುಂದಾಪುರ ಕಡೆಯಿಂದ ಭಟ್ಕಳದತ್ತ ಕಾರಿನಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಧಿತರಿಂದ 22 ಸಾವಿರ ಮೌಲ್ಯದ 150 ಕೆ.ಜಿ ಮಾಂಸ ವಶಕ್ಕೆ ಪಡೆಯಲಾಗಿದೆ.
ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಭಟ್ಕಳ ನಿವಾಸಿ ಮಹಮ್ಮದ್ ಗೌಸ್ ಗವಾಯಿ (37) ಬಂಧಿತ ಆರೋಪಿ. ನಜ್ಮುಲ್ ಎಂಬಾತ ಪರಾರಿಯಾದ ಆರೋಪಿ. ಗೋ ಮಾಂಸ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರಿಗೆ ಬಂದ ಮಾಹಿತಿಯಂತೆ ನ್ಯಾನೋ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಆದರೆ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದ ನಜ್ಮುಲ್ ಭಯಗೊಂಡು ಕಾರಿನಿಂದ ಇಳಿದು ಓಡಿ ಪರಾರಿಯಾಗಿದ್ದಾನೆ. ಚಾಲಕನಾದ ಮಹಮ್ಮದ್ ಗೌಸ್ ಗವಾಯಿಯನ್ನು ವಿಚಾರಿಸಿದಾಗ ಗೋ ಮಾಂಸವನ್ನು ಕುಂದಾಪುರ ಕಡೆಯಿಂದ ತಂದು ಭಟ್ಕಳದ ಮದುವೆ ಕಾರ್ಯಕ್ರಮಕ್ಕೆ ನೀಡಲು ಹೋತ್ತಿರುವುದಾಗಿ ತಿಳಿಸಿದ್ದಾನೆ.
ಆರೋಪಿಗಳು ಜಾನುವಾರು ಕಳ್ಳತನಗೈದು ಮಾಂಸ ಸಾಗಿಸುತ್ತಿರುವುದಾಗಿ ತಿಳಿದುಬಂದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.