ಶಿರಸಿ: ಕಲ್ಲಿನ ನಾಗರಕ್ಕೆ ಹಾಲೆರೆಯುವರು, ನಿಜ ನಾಗರ ಕಂಡರೆ ಓಡುವರು ಎಂಬ ಮಾತಿದೆ. ಆದರೆ, ಇಲ್ಲಿ ವಿಷ ಭರಿತ ನಿಜ ನಾಗರಕ್ಕೇ ಹಾಲೆರೆದರು, ಹೂವು ಹಾಕಿ ಪೂಜಿಸಿ ನಾಗರ ಪಂಚಮಿ ಹಬ್ಬವನ್ನು ವಿಶಿಷ್ಠವಾಗಿ ಆಚರಿಸಿದರು.
ಉರಗ ರಕ್ಷಕ ಪ್ರಶಾಂತ ಹುಲೇಕಲ್ ಹುಬ್ಬಳ್ಳಿ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಮಂಗಳವಾರ ನಿಜ ನಾಗರಕ್ಕೆ ಹಾಲೆರೆದು ಪೂಜಿಸುವ ಮೂಲಕ ನಾಗರ ಪಂಚಮಿ ಆಚರಿಸಿದರು. ವಿಶೇಷವೆಂದರೆ ಪುಟಾಣಿ ಮಕ್ಕಳೂ ಸಹ ಯಾವುದೇ ಭಯವಿರದೇ ಹಾವಿಗೆ ಪೂಜೆ ಸಲ್ಲಿಸಿದರು.
ತಾಲೂಕಿನಲ್ಲಿ ಎಲ್ಲೇ ನಾಗರ ಹಾವು, ಕಾಳಿಂಗ ಸರ್ಪ ಕಂಡರೆ ಉರಗ ರಕ್ಷಕ ಪ್ರಶಾಂತ ಹುಲೇಕಲ್ ಅವರಿಗೆ ಕರೆ ಬರುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಸಹ ಪ್ರಶಾಂತ ಹುಲೇಕಲ್ ಅವರ ಸಹಾಯ ಪಡೆದು ಊರೊಳಗೆ ಬಂದ ಹಾವನ್ನು ಹಿಡಿದು ಕಾಡಿಗೆ ಬಿಡುತ್ತಾರೆ. ನಾಗರ ಪಂಚಮಿ ಅಥವಾ ಹಿಂದಿನ ದಿನ ಹಿಡಿದ ಹಾವನ್ನು ಪ್ರಶಾಂತ ಹುಲೇಕಲ್ ನಾಗರ ಪಂಚಮಿ ಪೂಜೆ ಒಪ್ಪಿಸಿ ಬಳಿಕ ಕಾಡಿಗೆ ಬಿಟ್ಟುಬರುತ್ತಾರೆ.
ತಾಲೂಕಿನ ಬಿಸಲಕೊಪ್ಪ ಬಳಿಯಲ್ಲಿ ಸೋಮವಾರ ನಾಲ್ಕು ಹಾವುಗಳು ಪತ್ತೆಯಾಗಿದ್ದವು. ಎರಡು ದೊಡ್ಡ ಹಾವು ಮತ್ತು ಎರಡು ಮರಿಗಳನ್ನು ಅವರು ಹಿಡಿದಿದ್ದಾರೆ. ಮಂಗಳವಾರ ಈ ನಾಲ್ಕೂ ಹಾವುಗಳಿಗೆ ಪೂಜೆ ಸಲ್ಲಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ. ಹಾವುಗಳು ಎಂದಿಗೂ ಅವಾಗೇ ದಾಳಿ ನಡೆಸುವುದಿಲ್ಲ. ತಮ್ಮ ಜೀವಕ್ಕೆ ತೊಂದರೆ ಇದೆ ಎನಿಸಿದಾಗಲಷ್ಟೇ ಅವು ಕಚ್ಚುತ್ತವೆ. ಹಾವಿನ ಬಗ್ಗೆ ಭಯ ಪಡುವ ಬದಲು ಜಾಗೃತಿ ವಹಿಸಬೇಕು ಎನ್ನುತ್ತಾರೆ ಪ್ರಶಾಂತ ಹುಲೇಕಲ್.