ರಾಜ್ಯ ರೈತ ಸಂಘದಿಂದ ಸೆ. 12 ರಂದು ವಿಧಾನಸೌಧ ಮುತ್ತಿಗೆ: ಶಿರಸಿ ತಾಲೂಕಿನಿಂದ ಸಾವಿರಾರು ರೈತರು ಭಾಗಿ – ರಾಘವೇಂದ್ರ ನಾಯ್ಕ ಕಿರವತ್ತಿ

ಶಿರಸಿ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿದ್ದರೂ ರಾಜ್ಯ ಇನ್ನೂ ಈ ಕಾಯ್ದೆಯಿಂದ ಹೊರಬಂದಿಲ್ಲ. ಈ ಕುರಿತಂತೆ ಸೆ. 12 ರಂದು ಕರೆ ನೀಡಲಾಗಿರುವ ವಿಧಾನಸೌಧ ಮುತ್ತಿಗೆಗೆ ತಾಲೂಕಿನಿಂದ ಸಾವಿರಕ್ಕೂ ಅಧಿಕ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ರಾಜ್ಯದಲ್ಲಿ ಸ್ಪಂದನೆಯೇ ಇಲ್ಲವಾಗಿದೆ. ಗೊಬ್ಬರ 250 ರೂ. ದರವಿದ್ದರೂ, ಆಧಾರ ಲಿಂಕ್ ಮಾಡಿ 400 ಕ್ಕೆ ಜಿಲ್ಲೆಯಲ್ಲಿ ಮಾರುತ್ತಿದ್ದಾರೆ. ಬಿತ್ತನೆ ಬೀಜ ಸಹ ಕಳಪೆ ದರ್ಜೆಯದ್ದನ್ನೇ ಮಾರಾಟ ಮಾಡಲಾಗುತ್ತಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆ ಈಗಾಗಲೇ ಪಾಸ್ ಮಾಡಿದೆ ಎಂದರು.

ಇನ್ನು ಪೃಕೃತಿ ವಿಕೋಪದ ಅಡಿಯಲ್ಲಿ ಪ್ರತಿ ಗುಂಟೆಗೆ 70 ರೂ. ನೀಡುವ ಪರಿಹಾರ ಸಾಕಾಗಲ್ಲ. ಕಳೆದ ಮೂರು ವರ್ಷಗಳಿಂದ ಯಂತ್ರೋಪಕರಣದ ಸಬ್ಸಿಡಿ ರೈತರಿಗೆ ಸಿಗುತ್ತಿಲ್ಲ. ಈ ಎಲ್ಲವನ್ನೂ ಖಂಡಿಸಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ ನಾಯ್ಕ, ದೀಪಕ ಶೇಟ್, ರಾಜು , ಜಾಕೀರ್ ದಾಸನಕೊಪ್ಪ ಇತರರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಿದರೆ ಪ್ರಯೋಜನವಾಗುವುದಿಲ್ಲ. ತಾಲೂಕು ಸಂಚಾರ ಮಾಡಿದರೆ ರೈತರ ಸಮಸ್ಯೆ ಅರಿವಿಗೆ ಬರುತ್ತದೆ.

– ರಾಘವೇಂದ್ರ ನಾಯ್ಕ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ