ಕೋಟಾ ಶ್ರೀನಿವಾಸ ಪೂಜಾರಿ ವಿರುದ್ಧ ಮಾಡಿದ ಆರೋಪಕ್ಕೆ ಬಿಜೆಪಿಯಿಂದ ಖಂಡನೆ.!

ಭಟ್ಕಳ: ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ವಿಳಂಬಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಕುತಂತ್ರವೇ ಕಾರಣ ಎಂದು ಮೊಗೇರ ಸಮಾಜದ ಹೋರಾಟ ಸಮಿತಿ ಅಧ್ಯಕ್ಷರು ಹೇಳಿದ್ದಾರೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಈ ಹೇಳಿಕೆಯನ್ನು ಭಟ್ಕಳ ಬಿಜೆಪಿ ಮಂಡಲ ಕಂಡಿಸುತ್ತದೆ ಮತ್ತು ಈ ಹೇಳಿಕೆ ಕೂಡಲೇ ವಾಪಾಸ್ಸು ಪಡೆಯಬೇಕೆಂದು ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು.

ಅವರು ಮಣ್ಕುಳಿಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಶ್ರೀನಿವಾಸ ಪೂಜಾರಿಯವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊಗೇರ ಸಮಾಜದ ಅಧ್ಯಕ್ಷರು ಬಿಜೆಪಿಯಲ್ಲಿರುವ ಮೊಗೇರ ಸಮಾಜದ ಹಿರಿಯರೊಂದಿಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಮಾಡಿದ್ದಾರೆ. ಅಲ್ಲದೇ ಮೊಗೇರ ಸಮಾಜದ ಮುಖಂಡರು ಯಾವ ಯಾವ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಲು ನಮ್ಮನ್ನು ಸಂಪರ್ಕಿಸಿದ್ದಾರೋ ಅಂತಹ ವೇಳೆಯಲ್ಲಿ ನಾವು ಎಲ್ಲಾ ಬಾರಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿಸಿದ್ದೇವೆ ಎಂದರು.

ಈ ಸಮಸ್ಯೆಯ ಮೂಲ ಕಾರಣ ಹುಡುಕಿ ಹಿಂದಿನ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಭಟ್ಕಳ ಶಾಸಕ ಸುನೀಲ ನಾಯ್ಕ ಹಾಗೂ ಕಾನೂನು ಸಚಿವರಾದ ಮಾಧುಸ್ವಾಮಿ ಮೊಗೇರ ಸಮಾಜದ ಕೋರ್ಟ್ ತೀರ್ಪಿನ ದಾಖಲೆಗಳನ್ನು ನೀಡಿ, ಈ ಬಗ್ಗೆ ಸಲಹೆ ನೀಡಿದ್ದರು. ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದಾರೆ. ನಮ್ಮ ಪಕ್ಷ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಾಧ್ಯವಾದಷ್ಟು ಬೇಗ ಪರಿಹಾರ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಇಷ್ಟೆಲ್ಲ ಕೆಲಸ ಮಾಡುವ ವೇಳೆ ಈ ರೀತಿ ಹೇಳಿಕೆ ನೀಡಿರುವುದು ಶೋಭೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಸಂದರ್ಭದಲ್ಲಿ ಭಾಸ್ಕರ ದಹಿಮನೆ ಮಾತನಾಡಿ, ಮೊಗೇರ ಸಮಾಜದ ಸಮಸ್ಯೆ ಬಗ್ಗೆ ಭಾರತೀಯ ಜನತಾ ಪಾರ್ಟಿ ಸಮಾಜದ ಪರವಾಗಿಯೇ ಕೆಲಸ ಮಾಡಿಕೊಂಡು ಬಂದಿದೆ. ಆ ಪ್ರಯತ್ನವಾಗಿಯೇ ಶ್ರೀರಾಮುಲು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಕಾರವಾರದಲ್ಲಿ ಸಮಸ್ಯೆ ಆಲಿಸುವ ಬಗ್ಗೆಯೇ ಒಂದು ಸಭೆಯನ್ನು ಮಾಡಿದ್ದರು. ನಂತರ ದಿನಗಳಲ್ಲಿ ಆಗಿನ ಉಸ್ತುವಾರಿ ಸಚಿವಾರದ ಶಿವರಾಂ ಹೆಬ್ಬಾರ್ ಭಟ್ಕಳ ಶಾಸಕ ಸುನೀಲ ನಾಯ್ಕ ಹಾಗೂ ಗೋವಿಂದ ನಾಯ್ಕ ಸೇರಿ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಪದೇ ಪದೇ ಭೇಟಿಯಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಪ್ರಯತ್ನ ಮಾಡಿದ್ದೇವೆ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ನಮಗೆ ಮೊಗೇರ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂಬ ಉದ್ದೇಶ ಇದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ , ಶ್ರೀಕಾಂತ ನಾಯ್ಕ, ಸುರೇಶ ನಾಯ್ಕ, ಮೋಹನ ನಾಯ್ಕ, ಮುಕುಂದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.