ಹಲ್ಲೆ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು.!

ಹೊನ್ನಾವರ: ತಾಲೂಕಿನ ಪೋಲೀಸ್ ಠಾಣಾ ವ್ಯಾಪ್ತಿಯ ಕೆರೆಕೋಣ ಗ್ರಾಮದಲ್ಲಿ ಭಾರತಿ ಸಂದೀಪ ಶೆಟ್ಟಿ ಎನ್ನುವವರ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಗಣೇಶ ಅಣ್ಣಪ್ಪ ಶೆಟ್ಟಿಗೆ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರದ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ್ ಇ. ಬಣಕಾರ ವಿಚಾರಣೆ ನಡೆಸಿ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 341 ಕ್ಕೆ 1 ತಿಂಗಳ ಸಾದಾ ಜೈಲುವಾಸ, ಕಲಂ 323 ಕ್ಕೆ 6 ತಿಂಗಳ ಜೈಲುವಾಸ, ಕಲಂ 324 ಕ್ಕೆ 8 ತಿಂಗಳ ಜೈಲುವಾಸ, ಕಲಂ 504 ಕ್ಕೆ 6 ತಿಂಗಳ ಜೈಲುವಾಸ, ಕಲಂ 506 ಕ್ಕೆ 6 ತಿಂಗಳ ಜೈಲುವಾಸ ಶಿಕ್ಷೆ ವಿಧಿಸಿದ್ದಾರೆ.

ಆರೋಪಿತ 2021ರ ಡಿ.7 ರಂದು ರಂದು ಮದ್ಯಾಹ್ನ 12-45 ಗಂಟೆಗೆ ಕೆರೆಕೋಣ ಗ್ರಾಮದ ಭಾರತಿ ಸಂದೀಪ ಶೆಟ್ಟಿಯನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಜೊತೆಗೆ. ಕತ್ತಿಯಿಂದ ಹಲ್ಲೆ ಮಾಡಿದ್ದ. ಈ ವೇಳೆ ತಪ್ಪಿಸಲು ಬಂದ ಭಾರತಿಯವರ ಪತಿಯವರಿಗೂ ಕೈಯಿಂದ ಹೊಡೆದು ದೂಡಿ ಹಾಕಿ ಗಾಯಗೊಳಿಸಿದ್ದ. ಹಾಗೂ ಕೊಂದು ಹಾಕುವದಾಗಿ ಜೀವ ಬೆದರಿಕೆ ಹಾಕಿದ್ದ.

ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಹೊನ್ನಾವರ ಪೊಲೀಸ್ ಠಾಣೆಯ ಆಗಿನ ಪಿ.ಎಸ್.ಐ. ಮಹಾಂತೇಶ ಉದಯ ನಾಯಕ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಸಂಪದಾ ಅಶೋಕ ಗುನಗಾ ಈ ಪ್ರಕರಣದಲ್ಲಿ 8 ಜನ ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು.