ಅಂಕೋಲಾ: ಮನೆಯ ಮೇಲೆ ಉರುಳಿದ ಬೃಹತ್ ಗಾತ್ರದ ಮರ: ಸಂಪೂರ್ಣ ಹಾನಿಗೊಂಡ ಮನೆ

ಅಂಕೋಲಾ: ತಾಲ್ಲೂಕಿನ ಪುರಸಭೆಯ ವ್ಯಾಪ್ತಿಯ ವಂದಿಗೆಯ ಆಗೇರ ಕಾಲೋನಿಯ ಅಂಬೇಡ್ಕರ್ ಭವನದ ಹಿಂಬಾಗದ ಮನೆಯೊಂದರ ಮೇಲೆ ಬುಧವಾರ ಸಂಜೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ಸಂಪೂರ್ಣ ಮನೆ ಹಾನಿಗೊಂಡಿದೆ.
ಗೌರಿ ಬೊಮ್ಮಯ್ಯ ಆಗೇರ ಅವರ ಮನೆಯ ಮೇಲೆ ಮರ ಉರುಳಿ ಬಿದ್ದಿದೆ. ಹೊಸದಾಗಿ ನಿರ್ಮಿಸಿದ ಮನೆಯಾಗಿದ್ದು ಮರ ಉರುಳಿ ಬಿದ್ದ ಪರಿಣಾಮಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿಯಾಗಿದೆ. ಮನೆಯ ಎಲ್ಲಾ ಗೋಡೆಗಳು ಜಖಂಗೊಂಡಿದೆ. ಹಂಚುಗಳು ಪುಡಿ ಪುಡಿಯಾಗಿವೆ.
ಮರ ಬೀಳುವ ವೇಳೆ ಗೌರಿ, ಅವರ ಮಗ ಹಾಗೂ ಮೊಮ್ಮಗ ಇದ್ದರು. ಗೌರಿ ಅವರ ಮೊಮ್ಮಗನಿಗೆ ಮನೆಯ ಮೇಲಿಂದ ಬಿದ್ದ ಹಂಚು ಬಿದ್ದು ಗಾಯವಾಗಿದೆ.
ಕೌಟುಂಬಿಕ ಸ್ಥಿತಿಯೂ ಶೋಚನೀಯವಾಗಿದ್ದು ಗೌರಿ ಅವರು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ವಿಷಯ ತಿಳಿದ ಪುರಸಭೆಯ ಮಾಜಿ ಉಪಾಧ್ಯಕ್ಷೆ ರೇಖಾ ಗಾಂವಕರ ಸ್ಥಳಕ್ಕೆ ಆಗಮಿಸಿ ಸಂಬಂಧಿಸಿದವರಿಗೆ ಮಾಹಿತಿ ನೀಡಿದರು. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪಂಚನಾಮೆ ಮಾಡಿದರು. ತಹಶೀಲ್ದಾರರು ಬಂದು ಸ್ಥಳ ಪರೀಶೀಲನೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪರಿಶೀಲನೆ ನಡೆಸಿ ತುರ್ತಾಗಿ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸುತ್ತೇನೆ ಎಂದರು. ಪುರಸಭೆಯ ಅಧಿಕಾರಿಗಳು ತಾತ್ಕಾಲಿಕವಾಗಿ ಅಂಬೇಡ್ಕರ್ ಭವನದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಪುರಸಭೆ ಸಮುದಾಯ ಸಂಘಟನಾ ಅಧಿಕಾರಿ ಡಿ ಎಲ್ ರಾಥೋಡ್, ಕಂದಾಯ ನಿರೀಕ್ಷಕ ರಾಘವೇಂದ್ರ ಜನ್ನು, ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮೀ ದೊಡ್ಮನಿ ಮತ್ತಿತರರು ಹಾಜರಿದ್ದ ಪರೀಶೀಲನೆ ನಡೆಸಿದರು.