ಅಂಕೋಲಾ : ಐಎನ್ಎಸ್ ವಜ್ರಕೋಶದ ಕಮಾಂಡಿಂಗ್ ಆಫೀಸರ ಕ್ಯಾ. ಆರ್ ಕೆ ಸಿಂಗ್ ಸೋಮವಾರ ಪದ್ಮಶ್ರೀ ಸುಕ್ರೀ ಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ಹಾಗು ಅವರನ್ನು ಸನ್ಮಾನಿಸಿ ಗೌರವಿಸಿದರು. ಸುಕ್ರೀ ಗೌಡರನ್ನು ಕಂಡು ಅತೀವ ಸಂತಸ ವ್ಯಕ್ತಪಡಿಸಿ ಮಾತನಾಡಿದ ಅವರು ಎಂಭತ್ತೇಳರ ಇಳಿ ವಯಸ್ಸಿನಲ್ಲೂ ಇಷ್ಟು ಲವಲವಿಕೆಯಿಂದ ಇರುವದನ್ನು ಕಂಡು ಆಶ್ಚರ್ಯವಾಗುತ್ತಿದೆ. ಸುಕ್ರೀ ಗೌಡರ ಮನೆಯಲ್ಲಿನ ಪ್ರಶಸ್ತಿಗಳ ಗ್ಯಾಲರಿಯನ್ನು ವೀಕ್ಷಿಸಿದರೆ ಸುಕ್ರೀ ಗೌಡರಿಗೆ ಸಂದ ಪ್ರಶಸ್ತಿಗಳನ್ನು ಇಡಲು ಇಂತಹ ಎರಡು ಮನೆಗಳು ಸಾಲದು. ಸುಕ್ರೀ ಗೌಡ ಮತ್ತು ತಂಡದವರ ಹಾಡುಗಳು ಕೇಳಲು ತುಂಬ ಸೊಗಸಾಗಿವೆ. ತೀರ ಹಿಂದುಳಿದ ಹಾಲಕ್ಕಿ ಸಮಾಜದ ವಿದ್ಯಾವಂತರಿಗೆ ಸೂಕ್ತ ಉದ್ಯೋಗಾವಕಾಶ ನೀಡಲು ನನ್ನಿಂದಾದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಇದೇ ವೇಳೆ ಸುಕ್ರೀ ಗೌಡ ಹಾಗೂ ಅವರ ತಂಡವನ್ನು ಐಎನ್ಎಸ್ ವಜ್ರಕೋಶದಲ್ಲಿ ಆಯೋಜಿಸುವ ಒಂದು ಭವ್ಯ ಕಾರ್ಯಕ್ರಮದ ಅತಿಥಿಗಳಾಗಿ ಬರಲು ಆಮಂತ್ರಿಸಿದರು. ಸನ್ಮಾನವನ್ನು ಸ್ವೀಕರಿಸಿದ ಸುಕ್ರೀ ಗೌಡ ಮಾತನಾಡಿ ದೇಶಕ್ಕಾಗಿ ನಮ್ಮ ಜನ ತಮ್ಮ ಜಮೀನುಗಳನ್ನು ಕೊಟ್ಟು ತ್ಯಾಗ ಮಾಡಿದ್ದಾರೆ. ಇಲ್ಲಿಯ ಹಾಲಕ್ಕಿ ಸಮಾಜದ ವಿದ್ಯಾವಂತರಿಗೆ ಉದ್ಯೋಗವನ್ನು ನೀಡಿದರೆ ಅದೇ ತನಗೆ ಖುಷಿ ಎಂದರು.
ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಸುಕ್ರೀ ಗೌಡರ ಬಗ್ಗೆ ಮಾತನಾಡಿ ಅತೀ ಕಡಿಮೆ ವಯಸ್ಸಿನಲ್ಲಿಯೇ ಜಾನಪದ ಗಾಯಕಿಯಾಗಿ, ಸ್ಥಳೀಯರ ಜಾನಪದ ತಂಡವನ್ನು ಕಟ್ಟಿ, ಗ್ರಾಮದಲ್ಲಿ ಸಾರಾಯಿ ಮಾರಾಟ ವಿರೋಧಿ ಚಳುವಳಿ ನಡೆಸಿ, ಸಾಮಾಜಿಕ ಕಾರ್ಯಕರ್ತೆಯಾಗಿ ಹಲವು ಪ್ರಶಸ್ತಿಗಳನ್ನು ಪಡೆದು ಭಾರತದ ಸರ್ವಶ್ರೇಷ್ಠ ಪದ್ಮಶ್ರೀ ಪ್ರಶಸ್ತಿ ಪಡೆದಿರುವವರೆಗಿನ ಯಶೋಗಾಥೆಯನ್ನು ವಿವರಿಸಿದರು.
ಸುಕ್ರೀ ಗೌಡ ಮತ್ತು ಅವರ ತಂಡದ ಸದಸ್ಯರಾದ ಲಲಿತಾ ಗೌಡ, ಕುಸ್ಲೀ ಗೌಡ, ಪದ್ಮಾವತಿ ಗೌಡ ಹಾಗೂ ಸಣ್ಣು ಗೌಡ ಇವರು ತಮ್ಮ ಜಾನಪದ ಶೈಲಿಯ ಹಾಡುಗಳಿಂದ ಬಂದಿರುವ ಅತಿಥಿಗಳನ್ನು ರಂಜಿಸಿದರು. ಈ ಸಂದರ್ಭದಲ್ಲಿ ಐಎನ್ಎಸ್ ವಜ್ರಕೋಶದ ಲೆಫ್ಟಿನೆಂಟ್ ಚೈತನ್ಯ, ಎಂಸಿಎಮ್ಇ ಪ್ರಶಾಂತ ಶೇಖರ, ಪಿಓಇಎಲ್ಆರ್ ಸುಮನ್ ಮಂಡಲ್, ಭಾವಿಕೇರಿಯ ರವೀಶ ನಾಯ್ಕ, ಮಹೇಶ ಗೌಡ ಇನ್ನಿತರರು ಉಪಸ್ಥಿತರಿದ್ದರು.
“ನನಗೆ ಇನ್ನು ಬಿರುದು ಸನ್ಮಾನದ ಆಸೆಯಿಲ್ಲ ಯೋಜನೆಗಳಿಗಾಗಿ ತ್ಯಾಗ ಮಾಡಿದ ಸ್ಥಳೀಯರಿಗೆ, ನಮ್ಮ ಸಮಾಜದ ವಿದ್ಯಾವಂತರಿಗೆ ಉದ್ಯೋಗದ ಅವಕಾಶ ಮಾಡಿಕೊಟ್ಟರೆ ಅಷ್ಟೇ ಸಾಕು ಅದೇ ಸಂತೋಷ.”-ಪದ್ಮಶ್ರೀ ಸುಕ್ರೀ ಗೌಡ, ಬಡಗೇರಿ ಅಂಕೋಲಾ.