ಅಂಕೋಲಾ – ಮನೆಯ ಪಕ್ಕದಲ್ಲಿ ಅಡಗಿದ್ದ ನಾಗರಹಾವು

ಅಂಕೋಲಾ: ಮನೆಯ ಪಕ್ಕದಲ್ಲಿ ಅಡಗಿಕೊಂಡಿದ್ದ ಬಾರಿ ಗಾತ್ರದ ನಾಗರಹಾವು ಮನೆಯವರಲ್ಲಿ ಆತಂಕ ಮೂಡಿಸಿತ್ತು. ಉರಗ ಪ್ರೇಮಿ ಮಹೇಶ್ ನಾಯ್ಕ್ ಅಡಗಿಕೊಂಡಿದ್ದ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಪರಿಣಾಮ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ತಾಲ್ಲೂಕಿನ ಹೊಸಗದ್ದೆಯಲ್ಲಿ ಮನೆಯೊಂದರ ಪಕ್ಕದ ಬಿಲದಲ್ಲಿ ನಾಲ್ಕು ದಿನಗಳಿಂದ ಬಾರಿ ಗಾತ್ರದ ನಾಗರಹಾವು ಸೇರಿಕೊಂಡಿತ್ತು. ನಾಗರಹಾವು ಅಡಗಿಕೊಂಡಿರುವುದು ತಿಳಿದ ಮನೆಯ ಸದಸ್ಯರ ಆತಂಕಕ್ಕೆ ಕಾರಣವಾಗಿತ್ತು. ಒಂದೆರಡು ದಿನಗಳ ಬಳಿಕ ಅಲ್ಲಿಂದ ತೆರಳಬಹುದು ಎಂದು ಊಹಿಸಿದ್ದರು. ಆದರೆ ದೊಡ್ಡ ಬಿಲದಲ್ಲಿ ಅಡಗಿಕೊಂಡಿದ್ದ ಹಾವು ನಾಲ್ಕು ದಿನಗಳಾದರೂ ಹೊರಬರದ ಕಾರಣ ಪರಿಚಯಸ್ಥರ ಮೂಲಕ ಉರಗ ಪ್ರೇಮಿ ಮಹೇಶ್ ನಾಯ್ಕ್ ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಮಹೇಶ್ ನಾಯ್ಕ ಮತ್ತು ಅವರ ಪುತ್ರಿ ಸುರಕ್ಷಿತವಾಗಿ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಇದೆ ವೇಳೆ ಪಟ್ಟಣದ ಪುರಲಕ್ಕಿಬೇಣದ ಬಳಿಯ ಮನೆಯ ಸಮೀಪದಲ್ಲಿಯೂ ಕೂಡ ಹಾವೊಂದನ್ನು ಮಹೇಶ ನಾಯ್ಕ ರಕ್ಷಣೆ ಮಾಡಿದರು.