ಅಂಕೋಲಾ: ದಿನಕ್ಕೊಂದು ಅವಘಡ ಸೃಷ್ಟಿಸುತ್ತಿರುವ ಅಜ್ಜಿಕಟ್ಟಾ- ಶಿರಕುಳಿ ಕೂಡುರಸ್ತೆ ; ಶೀಘ್ರ ದುರಸ್ತಿಗೆ ಸಾರ್ವಜನಿಕರ ಆಗ್ರಹ

ಅಂಕೋಲಾ : ತಾಲೂಕಿನ ಪುರಸಭೆ ವ್ಯಾಪ್ತಿಯ ಶಿರಕುಳಿ ಮತ್ತು ಅಜ್ಜಿಕಟ್ಟಾಕ್ಕೆ ಸಂಪರ್ಕಕಲ್ಪಿಸುವ
ಕೂಡು ರಸ್ತೆ ಶೀಘ್ರದಲ್ಲಿ ದುರಸ್ಥಿ ಪಡಿಸಬೇಕೆಂದು ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.
ಇದೆ ರಸ್ತೆಯಿಂದ ದಿನನಿತ್ಯ ಮಹಿಳೆಯರು, ವಯೋವೃದ್ದರು, ಶಾಲಾ ವಿದ್ಯಾರ್ಥಿಗಳು, ದ್ವಿಚಕ್ರವಾಹನ ಸವಾರರು ಸಂಚರಿಸುತಿದ್ದು ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ. ಕಳೆದ ವಾರ ದಂಪತಿಗಳಿಬ್ಬರು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಎಡವಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.ರಾತ್ರಿಯ ವೇಳೆಯಲ್ಲoತೂ ಇಲ್ಲಿ ಜಾಗ್ರತೆಯಿಂದ ಸಂಚರಿಸಬೇಕು.
ಈ ರಸ್ತೆ ಕಿರಿದಾಗಿರುವುದರಿಂದ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದ ಪಾದಚಾರಿಗಳಿಗೂ ತೊಂದರೆ ಯಾಗಿದೆ.
ಒಳ ರಸ್ತೆಯಿಂದ ಅಜ್ಜಿಕಟ್ಟಾ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳ ತೀರಾ ತಗ್ಗು ಸ್ಥಳವಾಗುವುದರಿಂದ ಸ್ವಲ್ಪ ಯಾಮಾರಿದರೂ ಅಪಾಯ ಎದುರಾಗುವ ಸಾಧ್ಯತೆಯಿದೆ.
ಹಿಂದಿನ ಶಾಸಕಿ ರೂಪಾಲಿ ನಾಯ್ಕ ಇವರ ಶಾಸಕತ್ವದ ಅವಧಿಯಲ್ಲಿ ನಿಲಂಪುರದಿಂದ ಕಣಕಣೇಶ್ವರ ದೇಗುಲದ ವರೆಗೂ ಸುಂದರ ರಸ್ತೆ, ಝಗಮಗಿಸುವ ವಿದ್ಯುತ್ ದೀಪಗಳಿಂದ ಅಂಕೋಲಾ ಪಟ್ಟಣ ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ರಸ್ತೆ ನಿರ್ಮಾಣದ ಬರದಲ್ಲಿ ಈ ಕೂಡು ರಸ್ತೆಯನ್ನು ಅರೆ ಬರೆಯಾಗಿ ಅಗೆದು ಜಲ್ಲಿ, ಕಲ್ಲುಗಳನ್ನು ಅವೈಜ್ಞಾನಿಕವಾಗಿ ಸುರಿದ ಪರಿಣಾಮ ಜನರಿಗೆ ತೊಂದರೆ ಯಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ.


ಶಿರಕುಳಿ, ಅಂಬಾರಕೊಡ್ಲ,ಕಂತ್ರಿ ಅಲಗೇರಿ ಗ್ರಾಮಕ್ಕೂ ಸಂಪರ್ಕ ಕಲ್ಪಿಸಿಕೊಡುವ ಸರ್ವಋತು ರಸ್ತೆ ಇದಾಗಿದ್ದು ದಿನ ನಿತ್ಯ ಸಾವಿರಾರು ಜನರು ಇದೆ ರಸ್ತೆಯನ್ನು ನೆಚ್ಚಿಕೊಂಡಿದ್ದಾರೆ. ಕೂಡು ರಸ್ತೆ ಅವ್ಯವಸ್ಥೆಯಿಂದಾಗಿ ಒಂದಿಲ್ಲೊಂದು ಅವಘಡ ಸಂಭವಿಸುತ್ತಿವೆ. ಕಳೆದು ಎರಡು ದಿನದ ಹಿಂದೆ ಬೆಳಿಗ್ಗೆ ತನ್ನ ಮಗನನ್ನು ಶಾಲೆಗೆ ಬಿಡಲು ಹೊರಟ ದ್ವಿಚಕ್ರವಾಹನ ಸವಾರ ಹಾಗೂ ಆತನ ಮಗ ಇಬ್ಬರು ಎಡವಿ ಬಿದ್ದ ಪ್ರಕರಣ ಸಾರ್ವಜನಿಕರನ್ನು ಆಕ್ರೋಶಕ್ಕೆ ತಳ್ಳಿದೆ.ಆಟೋ ಚಾಲಕರು ಈ ರಸ್ತೆಗೆ ಬರಲು ಹಿಂದೇಟು ಹಾಕುತ್ತಾರೆ.
ಒಟ್ಟಿನಲ್ಲಿ ಅವ್ಯವಸ್ಥೆಯಿಂದ ಕೂಡಿರುವ ಇಂತಹ ಕೂಡು ರಸ್ತೆಗಳನ್ನು ಸಮರ್ಪಕಗೊಳಿಸದೇ ಇದ್ದರೆ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಗಮನ ವಹಿಸಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.


“ಅಜ್ಜಿಕಟ್ಟಾ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳ ತಗ್ಗು ಪ್ರದೇಶವಾಗಿರುವುದರಿಂದ ವಾಹನ ಹತ್ತಿಸಲು ತೊಂದರೆ ಯಾಗುತ್ತಿವೆ.ಈ ಕುರಿತು ನಾಲ್ಕು ತಿಂಗಳ ಹಿಂದೆ ಪುರಸಭೆಯ ಅಂದಿನ ಅಧ್ಯಕ್ಷರಾದ ಶ್ರೀಮತಿ ಶಾಂತಲಾ ನಾಡಕರ್ಣಿ ಯವರ ಗಮನಕ್ಕೆ ತರಲಾಗಿತ್ತು, ಅದನ್ನು ಶೀಘ್ರವಾಗಿ ಬಗೆಹರಿಸುವದಾಗಿ ಹೇಳಿದ್ದರು.ಆದರೆ ಈಗ ಅವರು ಅಧಿಕಾರದಲ್ಲಿಲ್ಲ. ಈಗಲಾದರೂ ಸಂಬಂಧಿಸಿದವರು ತುರ್ತು ಗಮನ ಹರಿಸಬೇಕು.”_ಚಂದ್ರಕಾಂತ ನಾಮಧಾರಿ ಸ್ಥಳೀಯರು