ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮತ್ತು ಆಯೋಗದ ಇತರ ಸದಸ್ಯರು ತಾಲ್ಲೂಕಿನ ಬೆಳಂಬಾರ ಮತ್ತು ನಾಡವರ ಸಭಾ ಭವನದಲ್ಲಿ ಪ್ರತ್ಯೇಕವಾಗಿ ವಿವಿಧ ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಿದರು.ಜಿಲ್ಲೆಯ ವಿವಿಧಡೆ ವಾಸಿಸುತ್ತಿರುವ ಮೊಗೆರ ಮತ್ತು ನಾಡವ ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ವೀಕ್ಷಣೆ ಮತ್ತು ಮಾಹಿತಿ ಸಂಗ್ರಹಣೆ ಈ ಭೇಟಿಯ ಉದ್ದೇಶವಾಗಿತ್ತು.ಎರಡು ಜನಾಂಗದ ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಆಗುತ್ತಿರುವ ಗೊಂದಲಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸುವ ಹಿನ್ನೆಲೆ ಪೂರ್ವಭಾವಿಯಾಗಿ ಆಯೋಗದ ಅಧ್ಯಕ್ಷರು ತಾಲೂಕಿಗೆ ಭೇಟಿ ನೀಡಿದ್ದಾರೆ.
ಮುಂಜಾನೆ ಬೆಳಂಬಾರದ ಕುಸ್ಲು ದೇವಾಲಯದ ಆವರಣದಲ್ಲಿ ಹಾಲಕ್ಕಿ ಸಮುದಾಯ ಜಿಲ್ಲಾ ಹಾಲಕ್ಕಿ ಸಮುದಾಯದ ಅಧ್ಯಕ್ಷ ಹನುಮಂತ ಗೌಡ ನೇತೃತ್ವದಲ್ಲಿ ಕೃಷಿ ಚಟುವಟಿಕೆಗಳಿಗೆ ಆಶಾದಾಯಕವಾಗಿರುವ ವರುಣನ ಆಗಮನಕ್ಕೆ ವಿನಂತಿಸಿ ಪೂಜೆ ಸಲ್ಲಿಸಲಾಯಿತು. ಅದೇ ಸಂದರ್ಭದಲ್ಲಿ ಜಯಪ್ರಕಾಶ ಹೆಗ್ಡೆ ಮತ್ತು ಆಯೋಗದ ಇತರ ಸದಸ್ಯರು ಭೇಟಿ ನೀಡಿದರು. ಹಾಲಕ್ಕಿ ಜನಾಂಗದವರನ್ನು ಶೀಘ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಮುಖಂಡರು ಮನವಿ ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಯಪ್ರಕಾಶ ಹೆಗ್ಡೆ, ಈ ವಿಚಾರವಾಗಿ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿಗಳ ಅಂಕಿತ ಪಡೆದ ನಂತರ ಅಧಿಕೃತವಾಗಿ ಜಾರಿಯಾಗುತ್ತದೆ. ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲವಾದರೂ ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತಮ್ಮ ವ್ಯಾಪ್ತಿಯ ಅನುಸಾರ ಕೈಗೊಳ್ಳುವುದಾಗಿ ತಿಳಿಸಿದರು. ಬೆಳಂಬಾರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾದೇವ ಗೌಡ, ಹೊನ್ನೆಬೈಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾದೇವ ಗುನಗಾ ಇದ್ದರು.
ಮಧ್ಯಾಹ್ನ ನಾಡವರ ಸಭಾಭವನದಲ್ಲಿ ನಾಡವರ ಸಮುದಾಯದೊಂದಿಗೆ ಚರ್ಚೆ ನಡೆಸಲಾಯಿತು. ಇದೇ ವೇಳೆ ಮಹಿಳೆಯೊಬ್ಬರು ತಮಿಳುನಾಡಿನ ಮೂಲದ ಸುಮಾರು ಮೂರು ತಲೆಮಾರುಗಳಿಂದ ತಾಲೂಕಿನಲ್ಲಿಯೇ ವಾಸವಾಗಿರುವ ಭೋವಿ ಜನಾಂಗದವರು ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆಯಲು ಅಡಚಣೆ ಉಂಟಾಗುತ್ತಿದೆ ಎಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಯಪ್ರಕಾಶ ಹೆಗ್ಡೆ, ಕೇಂದ್ರ ಸರ್ಕಾರದ ಆದೇಶದಲ್ಲಿ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಉಲ್ಲೇಖವಿದೆ. ಸ್ಥಳೀಯವಾಗಿ ಗೊಂದಲಗಳಿರುವುದು ಗಮನಕ್ಕಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಎಂದರು.
ಕೋಮಾರಪಂಥ ಸಮುದಾಯದ ಮುಖಂಡರು ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಿದಾಗ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಕೋರ್ಟ್ ಆದೇಶದಂತೆ ಮೀಸಲಾತಿಯಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕಿದೆ. ಮೀಸಲಾತಿ ಹೆಚ್ಚಳ ಅಥವಾ ಮೀಸಲಾತಿಗೆ ಸಂಬಂಧಿಸಿದ ತೀರ್ಮಾನಗಳು ಆಯೋಗದ ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದರು.
ನಾಡವರ ಸಮುದಾಯದ ಪ್ರಮುಖರು ಮಾತನಾಡಿ, ಅಧ್ಯಕ್ಷರ ಪ್ರವಾಸ ವಿವರದಲ್ಲಿ ನಾಡವ ಜನಾಂಗದ ಸ್ಥಿತಿಗತಿ ಪರಿಶೀಲನೆ ಮತ್ತು ಮಾಹಿತಿ ಸಂಗ್ರಹಣೆ ಎಂದು ನಮೂದಿಸಲಾಗಿದೆ. ಇಲ್ಲಿನ ನಾಡವರ ಜಾತಿ ಪ್ರಮಾಣ ಪತ್ರದಲ್ಲಿ ನಾಡವರು, ನಾಡೋರ್, ತೊರ್ಕೆ ನಾಡವರು ಎಂದು ಉಲ್ಲೇಖವಿರುತ್ತದೆ. ನಾಡವ ಎಂದು ಅಲ್ಲ. ಹಾಗಾಗಿ ಅಧ್ಯಕ್ಷರು ಸ್ಪಷ್ಟನೆ ನೀಡಬೇಕು. ನಮ್ಮ ಜನಾಂಗದ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಗೊಂದಲಗಳಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದರು.
ಆಯೋಗದ ಅಧ್ಯಕ್ಷರು ಅಥವಾ ಸದಸ್ಯರು ಇದಕ್ಕೆ ಸ್ಪಷ್ಟವಾದ ಉತ್ತರವನ್ನು ನೀಡದೇ ಜಾರಿಕೊಂಡರು. ನಾಡವರ ಸಮುದಾಯದ ಪರವಾಗಿ ಬಿ ಎಚ್ ನಾಯಕ, ಕೆ ಆರ್ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಗೊಂದಲಮಯವಾದ ಸಭೆ.
ಖಾಸಗಿ ಸಭಾಭವನದಲ್ಲಿ ಏರ್ಪಡಿಸಿದ ಈ ಸಭೆಯ ನಿಖರವಾದ ಕಾರಣ ಇಲಾಖೆಯಾಗಲಿ ಅಥವಾ ಆಯೋಗವಾಗಲಿ ಸ್ಪಷ್ಟಪಡಿಸಿಲ್ಲ. ವಿಶ್ವ ನಾಡವರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಮಾತ್ರ ಭಾಗವಹಿಸಿದ್ದು ಪೂರ್ವ ಪ್ರಚಾರದ ಕೊರತೆ ಕಂಡು ಬರುತ್ತಿತ್ತು. ತಾಲೂಕಿನಲ್ಲಿ ಇತರೆ ಹಿಂದುಳಿದ ವರ್ಗದ ಬಹುಸಂಖ್ಯಾತ ಜನಾಂಗಗಳಿದ್ದು ಅವರ ಅಹವಾಲು ಇಲ್ಲವೇ ಸಮಸ್ಯೆಗಳ ಕುರಿತು ಆಲಿಸಲು ಹಿಂದುಳಿದ ವರ್ಗಗಳ ಆಯೋಗ ಸಿದ್ಧವಿಲ್ಲ ಎನ್ನುವುದನ್ನು ಕಾಟಾಚಾರದ ಸಭೆ ಸಾರುವಂತಿತ್ತು. ನಿಗದಿತ ಸಮಯಕ್ಕಿಂತ ಎರಡೂವರೆ ತಾಸು ವಿಳಂಬವಾಗಿ ಪ್ರಾರಂಭವಾದ ಸಭೆ 20 ನಿಮಿಷಗಳಲ್ಲಿಯೇ ಮುಗಿದು ಹೋಯಿತು.
ಬಹು ಸಂಖ್ಯಾತ ಹಿಂದುಳಿದ ವರ್ಗಗಳ ಅಹವಾಲು ಆಲಿಸಿದರೆ ಸೂಕ್ತವಾಗಿತ್ತು ಎಂದು ಕೆಲವರು ಆಯೋಗದ ಪದಾಧಿಕಾರಿಗಳಿಗೆ ಸೂಚ್ಯವಾಗಿ ತಿಳಿಸಿದರು.