ರಾಷ್ಟ್ರಮಟ್ಟದ ಇನ್ಸ್ ಪಾಯರ್ಡ್ ಅವಾರ್ಡ್ ವಸ್ತು ಪ್ರದರ್ಶನಕ್ಕೆ ಸಂದೇಶ್ ಸಿದ್ಧಪಡಿಸಿದ ರೋಡ್ ಕ್ಲೀನರ್ ಯಂತ್ರ ಆಯ್ಕೆ.!

ಭಟ್ಕಳ: ತಾಲೂಕಿನ ಹೆಬಳೆಯ ಗಾಂಧಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ಸಂದೇಶ ಅನಂತ ನಾಯ್ಕ ಸಿದ್ಧಪಡಿಸಿರುವ ರೋಡ್ ಕ್ಲೀನರ್ ಯಂತ್ರ, ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ರಾಷ್ಟ್ರಮಟ್ಟದ ಇನ್ಸ್ ಪಾಯರ್ಡ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಸೈಕಲ್ ಅಂಗಡಿಯಿಂದ ಪಡೆದ 2 ಚಕ್ರ, ಚೈನ್ ಮತ್ತು ಸಾಕೆಟ್, ಎಮ್‌. ಎಸ್. ಶೀಟ್, ಪೈಪ್, ಕಬ್ಬಿಣದ ಸರಳು, ರೋಲಿಂಗ್ ಬರ್, ಬೇರಿಂಗ್ ಇತ್ಯಾದಿಗಳನ್ನು ಬಳಸಿ ಅತಿ ಕಡಿಮೆ ಎಂದರೆ 3-4 ಸಾವಿರ ರುಪಾಯಿ ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಲಾಗಿದ್ದು, ಶಿಕ್ಷಕ ಹೇಮಾವತಿ ನಾಯ್ಕ ವಿದ್ಯಾರ್ಥಿ ಸಂದೇಶನಿಗೆ ಮಾರ್ಗದರ್ಶನ ನೀಡಿದ್ದಾರೆ.

ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿರುವ ಬಾಟಲಿ, ಪ್ಲಾಸ್ಟಿಕ್ ಕವರ್, ಕಸ-ಕಡ್ಡಿಗಳನ್ನು ಈ ಯಂತ್ರದಿಂದ ಸುಲಭವಾಗಿ ವಿಲೇವಾರಿ ಮಾಡಲು ಬಳಸಬಹುದಾಗಿದೆ. 2020-2021 ರ ಕೋವಿಡ್ ಕಾರಣದಿಂದಾಗಿ ಆನ್‌ಲೈನ್‌ನಲ್ಲಿ ನಡೆದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ನಿತ್ಯೋಪಯೋಗಿ ಯಂತ್ರ ನಿರ್ಮಾಣ ಸ್ಪರ್ಧೆಯಲ್ಲಿ ಸಂದೇಶ ಸಿದ್ಧಪಡಿಸಿರುವ 3 ರೋಡ್ ಕ್ಲೀನರ್ ಆಯ್ಕೆಯಾಗಿತ್ತು. ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಭಟ್ಕಳದ ಸಂದೇಶ ಸ್ಥಾನ ಪಡೆದಿದ್ದಾನೆ.

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯ 1000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸಂದೇಶನ ಸಾಧನೆಯ ಬಗ್ಗೆ ಮಾಹಿತಿ ನೀಡಿದ, ಮಾರ್ಗದರ್ಶಿ ಶಿಕ್ಷಕಿ ಹೇಮಾವತಿ ನಾಯ್ಕ, ಈ ವಿದ್ಯಾರ್ಥಿ ಸರ್ಪನಕಟ್ಟೆಯಿಂದ ನಿತ್ಯವೂ ಶಾಲೆಗೆ ಬರುತ್ತಿದ್ದು, ರಸ್ತೆಯ ಬದಿಯಲ್ಲಿ ಕಾಣುವ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಬಗ್ಗೆ ಕಳಕಳಿ ವ್ಯಕ್ತಪಡಿಸಿ ಈ ಯಂತ್ರ ಸಿದ್ಧಪಡಿಸಲು ಮುಂದಾಗಿದ್ದಾನೆ. ಆತನಿಗೆ ಮುಂದೆ ಯಶಸ್ಸು ಸಿಗಲಿ ಎಂದು ಹಾರೈಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಿಆರ್‌ಪಿ ಕೃಷ್ಣ ಪಟಗಾರ, ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ ನಾಯ್ಕ, ಶಿಕ್ಷಕಿ ಶ್ವೇತಾ ನಾಯ್ಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ ನಾಯ್ಕ, ಊರ ಪ್ರಮುಖ ಭವಾನಿ ಶಂಕರ ನಾಯ್ಕ, ಬಿಆರ್‌ಸಿ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ, ಡಿಆರ್‌ಪಿ ಬಿ.ಕೆ.ನಾಯ್ಕ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.