ಹೊನ್ನಾವರದಲ್ಲಿ ಜರುಗಿದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ

ಹೊನ್ನಾವರ: ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತ, ತಾಲೂಕ ಪಂಚಾಯತ್ ಹಾಗೂ ತಾಲೂಕ ನಾಮಧಾರಿ ಅಭಿವೃದ್ಧಿ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಜರುಗಿತು.
ಜಿಲ್ಲಾ ಸಾಂಘಿಕ ಅಧಿಕಾರಿಯಾಗಿ ನಿವೃತ್ತರಾದ ಆರ್.ಎನ್.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನೆರೆಯ ದಕ್ಷಿಣ ಕನ್ನಡದಂತಹ ಜಿಲ್ಲೆಯ ಅಭಿವೃದ್ದಿಗೆ ನಾರಾಯಣ ಗುರುಗಳ ಸೇವಾ ಸಂಸ್ಥೆಯು ಕಾರಣವಾಗಿದೆ ಎಂದರು. ಅವರು ಶೈಕ್ಷಣಿಕವಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ನಾಗರಾಜ ನಾಯ್ಕಡ್ ಮಾತನಾಡಿ ತಾಲೂಕಾಡಳಿತ ವತಿಯಿಂದ ಸರ್ಕಾರದ ಮಾರ್ಗಸೂಚಿಯಂತೆ ಸಂಘಟನೆಯ ಸಹಕಾರದ ಮೇರೆಗೆ ಯಶಸ್ವಿ ಕಾರ್ಯಕ್ರಮ ಆಯೋಜಿಸುವ ಕಾರ್ಯ ಮಾಡುತ್ತಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಸಿದ್ದಾಪುರದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗೋಪಾಲ ನಾಯ್ಕ ಭಾಷಿ ಮಾತನಾಡಿ ಸಮಾಜಕ್ಕೆ ದುಡಿದವರನ್ನು ಸ್ಮರಿಸುವ ಕಾರ್ಯವಾಗಬೇಕಿದೆ. ನಾರಾಯಣ ಗುರುಗಳು ಆಧ್ಯಾತ್ಮಿಕ ಶಿಕ್ಷಣದ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನ ನಡೆಸಿದರು. 19 ನೇ ಶತಮಾನದ ಅಂತ್ಯ 20 ನೇ ಶತಮಾನದ ಆರಂಭದ ವೇಳೆ ಸಮಾಜದಲ್ಲಿ ತಾಂಡವಾಡುತ್ತಿರುವ ಅಸಮಾನತೆಯನ್ನು ಹೊಗಲಾಡಿಸಿದ್ದರು. ಮಹಾತ್ಮ ಗಾಂಧೀಜಿಯವರಿಗೆ ಇವರು ಪ್ರೇರಕರಾಗಿರುವುದು ಇವರ ಸಾಧನೆಗೆ ಸಾಕ್ಷಿಯಾಗಿದೆ. ಯುವಸಮುದಾಯ ಇವರ ಆದರ್ಶ ಗುಣ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗೊಣ ಎಂದರು.

ವೇದಿಕೆಯಲ್ಲಿ ಬ್ರಹ್ಮಶ್ರಿ ನಾರಾಯಣ ಗುರು ಧರ್ಮಪಾಲನ ಸಂಘದ ಅಧ್ಯಕ್ಷ ಧನಂಜಯ ನಾಯ್ಕ, ಗ್ರಾ.ಪಂ.ಅಧ್ಯಕ್ಷರಾದ ಅಜಿತ ನಾಯ್ಕ, ಸುರೇಖಾ ನಾಯ್ಕ, ಗ್ರಾ.ಪಂ. ಉಪಾಧ್ಯಕ್ಷ ಸಚೀನ ನಾಯ್ಕ, ಪ.ಪಂ.ಸದಸ್ಯ ಶ್ರೀಪಾದ ನಾಯ್ಕ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.