ಯಲ್ಲಾಪುರ: ಆರ್ಥಿಕವಾಗಿ ತೀರಾ ಹಿಂದುಳಿದ ಸಿದ್ದಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಮನುವಿಕಾಸ ಸಂಸ್ಥೆ ಕಾರ್ಯಯೋಜನೆ ರೂಪಿಸಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಣಪತಿ ಭಟ್ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಚ್.ಡಿ.ಎಫ್.ಸಿ ಪರಿವರ್ತನ ಸಹಯೋಗದಡಿಯಲ್ಲಿ
ಸಿದ್ದಿ ಸಮುದಾಯದವರ ತೋಟಗಾರಿಕೆ ಅಭಿವೃದ್ಧಿ ಸಲುವಾಗಿ ಪಂಪಸೆಟ್, ಐಬೆಕ್ಸ್ ಬೇಲಿ, ಅಡಿಕೆ ಸಸಿ, ಕೃಷಿ ಹೊಂಡ ನಿರ್ಮಾಣ ಸಲುವಾಗಿ ಸಂಸ್ಥೆ ನೆರವಾಗುತ್ತಿದೆ. ಸಿದ್ದಿ ಸಮುದಾಯದ 70 ಕುಟುಂಬಗಳಿಗೆ ಸುಮಾರು 320 ಜೇನುಪೆಟ್ಟಿಗೆ ನೀಡಲಾಗಿದೆ. ಹನಿ ಕ್ಲಸ್ಟರ್ ನಿರ್ಮಿಸಿ ಜೇನುತುಪ್ಪ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ಅಲ್ಲದೇ ಸಿದ್ದಿ ಸಮುದಾಯದ ಯುವಕ ಯುವತಿಯರಿಗೆ ಆತಿಥ್ಯ ನಿರ್ವಹಣಾ ತರಬೇತಿ ನೀಡಿ ಹೋಟೆಲ್ ಗಳಲ್ಲಿ ಕೆಲಸ ಮಾಡುವ ಕೌಶಲ್ಯ ತಿಳಿಸಿ ಕೊಡುವ ಮೂಲಕ ಸ್ವ-ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದೆ. ಸಿದ್ದಿ ಸಮುದಾಯದವರು ತಯಾರಿಸಿದ ಉತ್ಪನ್ನಗಳ ಮಾರುಕಟ್ಟೆ ಸಲುವಾಗಿ ಕಂಪನಿ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸಿದ್ದಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಒಟ್ಟಾರೆ ಸಿದ್ದಿ ಸಮುದಾಯದ ಸರ್ವಾಂಗೀಣ ವಿಕಾಸಕ್ಕೆ ಮನುವಿಕಾಸ ಸಂಸ್ಥೆ ಶ್ರಮಿಸುತ್ತಿದೆ ಎಂದರು.ಈ ಸಂದರ್ಭದಲ್ಲಿ ಮನುವಿಕಾಸ ಸಂಸ್ಥೆ ಹಾಗೂ ಎಚ್.ಡಿ.ಎಫ್.ಸಿ ಪರಿವರ್ತನದ ಪ್ರಮುಖರಾದ ರಾಮಚಂದ್ರ ಸಿದ್ದಿ, ಮೋಹನ ಸಿದ್ದಿ, ಪವನ ಬೊಮ್ಮನಹಳ್ಳಿ, ಚಂದನಾ ನಾಯಕ ಇದ್ದರು.