ನವದೆಹಲಿ: ವಿಮಾನದಲ್ಲಿ ಸ್ಪೋಟಕ ವಸ್ತುಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಕರೆ ಬಂದಿದ್ದು ಆತಂಕಕ್ಕೆ ಕಾರಣವಾಯಿತು. ದುಬೈಗೆ ತೆರಳುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆ ಬಂದಿದ್ದರಿಂದ, ತನಿಖೆ ನಡೆಸಲಾಗುತ್ತಿದೆ.
ಈ ಸಂಬಂಧ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ತಿಳಿದ ಬಳಿಕ ವಿಮಾನ ನಿಲ್ದಾಣದ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 160 ಪ್ರಯಾಣಿಕರೊಂದಿಗೆ ಬೆಳಿಗ್ಗೆ 7.20 ಕ್ಕೆ ನಿರ್ಗಮಿಸಲು ಸಿದ್ಧವಾಗಿದ್ದ ಇಂಡಿಗೋ ವಿಮಾನದೊಳಗೆ ಶೋಧವನ್ನು ನಡೆಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂಡಿಗೋ ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತುಗಳನ್ನು ಹಾಕಲಾಗಿಲ್ಲ ಎನ್ನುವುದನ್ನ ಖಚಿತಪಡಿಸಿಕೊಳ್ಳಲು ಭದ್ರತಾ ಏಜೆನ್ಸಿಗಳಿಂದ ತಪಾಸಣೆ ನಡೆಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಅಂತಹ ಯಾವುದೇ ವಸ್ತುಗಳು ಪತ್ತೆಯಾಗದ ಕಾರಣ ಬೆಳಿಗ್ಗೆ 7.20 ಕ್ಕೆ ಹೊರಡಬೇಕಿದ್ದ ವಿಮಾನವು ಭಾನುವಾರ ಹೊರಡಲಿದೆ ಎಂದು ಪಿಟಿಐ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಸುಮಾರು 170 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವಸತಿ ಒದಗಿಸಲಾಗಿದೆ. ಈಗಾಗಲೇ ಕರೆ ಮಾಡಿದವರ ಪತ್ತೆಗೆ ವಿಚಾರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.