ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಲು ಯೋಗ್ಯ ವ್ಯಕ್ತಿಯನ್ನು ಪಕ್ಷ ಹುಡುಕುತ್ತಿದೆ. ಈ ವೇಳೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಆಯ್ಕೆಯಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ. ಇಂದು CWC ಸಭೆ ನಡೆಯಲಿದ್ದು, ಸಭೆಯ ಬಳಿಕ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಗಳಿದೆ. ರಾಹುಲ್ ಗಾಂಧಿ ಅಧ್ಯಕ್ಷರಾಗಲು ನಿರಾಕರಿಸಿದ ಹಿನ್ನಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಹಿಂದೆ ಘೋಷಣೆ ಮಾಡಿದಂತೆ ಅಗಸ್ಟ್ 22 ರಿಂದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಬೇಕಿತ್ತು. ರಾಹುಲ್ ಗಾಂಧಿ ಅವರಿಗೆ ಮತ್ತೆ ಅಧಿಕಾರ ವಹಿಸಿಕೊಳ್ಳಲು ಕೆಲವಯ ಹಿರಿಯ ನಾಯಕರು ಮನವಿ ಮಾಡಿದ್ದರು. ಆದರೆ ರಾಹುಲ್ ಗಾಂಧಿ ನಿರಾಕರಿಸಿದ ಹಿನ್ನಲೆ ಚುನಾವಣೆ ಘೋಷಣೆ ವಿಳಂಬವಾಗಿದೆ.
ರಾಹುಲ್ ಗಾಂಧಿ ನಿರಾಕರಣೆ ಹಿನ್ನಲೆ ಪಕ್ಷದಲ್ಲಿ ಹಿರಿಯರಾಗಿರುವ ಹಾಗೂ ಸಿಎಂ ಸ್ಥಾನದಲ್ಲಿರುವ ಅಶೋಕ್ ಗೆಹ್ಲೋಟ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಚಿಂತನೆಗಳು ನಡೆದಿವೆ. ಈ ಸಂಬಂಧ ಸೋನಿಯಾಗಾಂಧಿ ಕೂಡಾ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಅಶೋಕ್ ಗೆಹ್ಲೋಟ್ ಗೆ ಅಧ್ಯಕ್ಷ ಸ್ಥಾನ ನೀಡುವುದರಿಂದ ಸಿಎಂ ಸ್ಥಾನ ಖಾಲಿಯಾಗಲಿದ್ದು, ಈ ಜಾಗಕ್ಕೆ ಸಚಿನ್ ಪೈಲಟ್ ಅವರನ್ನು ಆಯ್ಕೆ ಮಾಡಿದ್ದಲ್ಲಿ ರಾಜಸ್ಥಾನ ರಾಜಕೀಯದಲ್ಲಿರುವ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಹಾಕಿಕೊಂಡಿದೆ.