‘ಆಪರೇಶನ್ ಚೀತಾ’ಕ್ಕೆ ಸಾಥ್ ನೀಡಲಿರುವ ಸಕ್ರೆಬೈಲು ಗಜಸೇನೆ.!

ಬೆಳಗಾವಿ: ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿರುವ ನಗರದ ಗಾಲ್ಫ್ ಕ್ಲಬ್ ನಲ್ಲಿ ಅಡಗಿರೋ ಚಿರತೆ ಪತ್ತೆ ಕಾರ್ಯಾಚರಣೆ 20 ನೇ ದಿನಕ್ಕೆ ಕಾಲಿಟ್ಟಿದೆ. ಚಿರತೆ ಸೆರೆಗೆ ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ ಎರಡು ಆನೆಗಳನ್ನು ತರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಂದೂ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ನಗರದ ಗಾಲ್ಫ್ ಮೈದಾನದ ಒಂದು ಕಿಲೊಮೀಟರ್ ವ್ಯಾಪ್ತಿಯಲ್ಲಿ ಬರುವ 22 ಸರ್ಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ. 250 ಎಕರೆ ಪ್ರದೇಶದಲ್ಲಿ ಇರೋ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆ ಸೆರೆಗೆ ಇಂದಿನಿಂದ ಎರಡು ಆನೆಗಳ ಬಳಸಿಕೊಂಡು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಲಿದೆ. ಶಿವಮೊಗ್ಗದ ಸಕ್ರೆಬೈಲ್ ಬಿಡಾರ್ ದಿಂದ ಇಂದು ಮಧ್ಯರಾತ್ರಿ ಎರಡು ಆನೆಗಳು ಕರೆತರಲಾಗಿದೆ. ಅರ್ಜುನ್ ಮತ್ತು ಆಲೆ ಎನ್ನುವ ಎರಡು ಆನೆಗಳನ್ನು ಬಳಸಿ ಇಂದು ಕೂಂಬಿಂಗ್ ನಡೆಸಲಾಗುತ್ತದೆ.

ಆನೆಗಳ ಜತೆಗೆ ಡಾರ್ಟ್ ಸ್ಪೇಷಲಿಸ್ಟ್ ಡಾ. ವಿನಯ್ ಸಹ ಬೆಳಗಾವಿಗೆ ಆಗಮಿಸಿದ್ದು ಡಾ. ವಿನಯ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಇತ್ತೀಚೆಗೆ ಡಾ.ವಿನಯ ನೇತೃತ್ವದಲ್ಲಿ ಭದ್ರಾವತಿಯಲ್ಲಿ ಚಿರತೆ ಸೆರೆ ಹಿಡಿಯಲಾಗಿತ್ತು. ಹೀಗಾಗಿ ಅವರ ಜೊತೆಗೆ ನುರಿತ ಮಾವುತರು, ಕವಾಡಿಗಳು ಹಾಗೂ ಬೆಳಗಾವಿಯಲ್ಲಿ ಸದ್ಯ ಇರೋ ಇಬ್ಬರು ಡಾರ್ಟ್ ಸ್ಪೇಷಲ್ ಶೂಟರ್ಸ್ ಬಳಸಿಕೊಳ್ಳಲಾಗುತ್ತಿದೆ. 80ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಇಂದಿನಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.