ಹಾಸನ: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದೆ. ಮಳೆಯಿಂದ ತುಂಬಾ ಹಾನಿಯಾಗಿದೆ. ಮನೆಗಳೆಲ್ಲಾ ಹಾಳಾಗಿವೆ ಆದರೆ ಇಲ್ಲಿಯವರೆಗೂ ಸರ್ಕಾರ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಮೂಡಿಗೆರೆಯಲ್ಲಿ ಕೆಲವು ಮನೆಗಳಿಗೆ ಭೇಟಿ ಕೊಟ್ಟಿದ್ದೆ. 2019 ರಲ್ಲಿ ಮಳೆಯಿಂದ ಪ್ರಾಣ ಕಳೆದುಕೊಂಡಿರುವ ವ್ಯಕ್ತಿಗೆ ಇದುವರೆಗೂ ಪರಿಹಾರ ಕೊಟ್ಟಿಲ್ಲ, ಮನೆ ಕಟ್ಟಿಸಿ ಕೊಟ್ಟಿಲ್ಲ. ಇಡಿ ಕರ್ನಾಟಕದಲ್ಲಿ 18 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದೆ. ಸುಮಾರು ಐದು ಲಕ್ಷದ ಇಪ್ಪತ್ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇವತ್ತಿನವರೆಗೂ ಸರ್ವೆ ಮಾಡಿಲ್ಲ, ಎಷ್ಟು ಬೆಳೆ ಹಾನಿಯಾಗಿದೆ ಅಂದಾಜು ಮಾಡಿಲ್ಲ. ಹದಿನೆಂಟು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಯಾವ ಸಚಿವರು, ಯಾವ ಜಿಲ್ಲೆಗೂ ಭೇಟಿ ನೀಡಿಲ್ಲ. ಪರಿಹಾರ ಕೊಟ್ಟಿದ್ದೀವಿ ಅಂತ ಹೇಳ್ತಾರೆ ಅಷ್ಟೆ. ರೈತರಿಗೆ ತಲುಪಿದೆಯಾ.? ಅಂತ ಸಿದ್ದು ಪ್ರಶ್ನಿಸಿದರು. ಸರ್ಕಾರ ಪರಿಹಾರ ಕೊಟ್ಟಿದ್ದೇವೆ ಅಂತ ಹೇಳ್ತಾರೆ. ಆದರೆ ಗ್ರೌಂಡ್ ರಿಯಾಲಿಟಿ ಬೇರೆ ಇದೆ. ಇದರಲ್ಲಿ ಸರ್ಕಾರ ಸಂಪೂರ್ಣ ವೈಫಲ್ಯವಾಗಿದೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಟ್ ಈಸ್ ಎ ಸ್ಟೇಟ್ ಸ್ಪಾನ್ಸರ್ಡ್ ಪ್ರೊಟೆಸ್ಟ್.!
ನಾನು ಹೋದಲೆಲ್ಲ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದಾರೆ. ಹಿಂದೂ ಮಹಾಸಭಾದ ಸಾವರ್ಕರ್ ಅಂತ ಇದ್ದಾರಲ್ಲ ಅವರ ಬಗ್ಗೆ ಮಾತಾಡಿದೆ ಅಂತ ಕಪ್ಪು ಬಾವುಟ ತೋರಿಸುತ್ತಿದ್ದಾರೆ. ದೇರ್ ಈಸ್ ನೋ ಇಂಟಲಿಜೆನ್ಸ್, ದೇರ್ ಈಸ್ ನೋ ಗವರ್ನಮೆಂಟ್. ಇದನ್ನು ನಾನು ಹೇಳಿಲ್ಲ ಮಾಧುಸ್ವಾಮಿ ಹೇಳಿದ್ದಾರೆ. ನಾವು ಸರ್ಕಾರ ನಡೆಸುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಂತ ಇದರ ಅರ್ಥ ಏನು ಎಂದು ಪಶ್ನಿಸಿದರು. ಬಿಜೆಪಿಯವರು ಯಾವ ನೀಚ ಕೆಲಸ ಮಾಡಲು ತಯಾರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆ.26 ರಂದು ಕೊಡಗಿಗೆ ಹೋಗಿ ಎಸ್ಪಿ ವಿರುದ್ದವಾಗಿ ದೊಡ್ಡ ಪ್ರತಿಭಟನೆ ಮಾಡ್ತಾ ಇದ್ದೀನಿ. ತಿತಿಮತಿಯಲ್ಲಿ ಹತ್ತರಿಂದ ಹದಿನೈದು ಹುಡುಗರು ಸೇರ್ಕಂಡು ಗೋ ಬ್ಯಾಕ್ ಸಿದ್ದರಾಮಯ್ಯ ಅಂಥ ಘೋಷಣೆ ಕೂಗುತ್ತಿದ್ದರು. ಆದಾದ ಮೇಲೆ ಮಡಿಕೇರಿಯಲ್ಲಿ ಇದ್ದರು. ಪೊಲೀಸರು ರೌಂಡ್ ಅಪ್ ಮಾಡಿ ಕರ್ಕಂಡು ಹೋಗಲು ಆಗ್ತಿರ್ಲಿಲ್ವಾ, ಆದೇನ್ ದೊಡ್ಡ ಕೆಲಸನಾ. ಅವರೇ ಬಿಟ್ಟು ಸುಮ್ಮನೆ ನಿಂತಿದ್ದರೆ ಎಂದು ಕಿಡಿಕಾರಿದರು.