ಕಾಂಗ್ರೆಸ್ ಕಾರ್ಯಕರ್ತರಿಂದ ಸಾವರ್ಕರ್ ಭಾವಚಿತ್ರಕ್ಕೆ ಅಪಮಾನ: ಹಿಂದೂಪರ ಸಂಘಟನೆಗಳಿಂದ ರಸ್ತೆ ತಡೆದು ಆಕ್ರೋಶ

ಧಾರವಾಡ: ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ಸುಟ್ಟು ಅವಮಾನ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಂಡು, ಬಂಧಿಸುವಂತೆ ಆಗ್ರಹಿಸಿ ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೆಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಇದು ಖಂಡನೀಯ, ಪೊಲೀಸರು ಈ ಕುರಿತು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಹಿಂದು ಕಾರ್ಯಕರ್ತರು ಒತ್ತಾಯಿಸಿದರು. ಉಪನರ ಠಾಣೆ ಎದರು ಜಮಾಯಿಸಿದ ಹಿಂದೂಪರ ಸಂಘಟನೆಯ ಹಾಗೂ ಬಿಜೆಪಿಯ ಕಾರ್ಯಕರ್ತರು ಬೆಳಗಾವಿ ರಸ್ತೆ ಬಂದ ಮಾಡಿ, ರಸ್ತೆಯಲ್ಲೇ ರಾಮ ಭಜನೆ ಹಾಗೂ ರಘುಪತಿ ರಾಘವ ರಾಜಾರಾಂ ಭಜನೆ ಹೇಳುತ್ತ ಕುಳಿತರು.

ಪ್ರತಿಭಟನಾ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಭೇಟಿ ನೀಡಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಆದರೂ ಮನವಿಗೆ ಬಗ್ಗದ ಪ್ರತಿಭಟನಕಾರರು, ಸಾವರ್ಕರ್ ಭಾವಚಿತ್ರ ಸುಟ್ಟವರ ಮೇಲೆ‌ ಎಫ್‌ಐಆರ್ ದಾಖಲಿಸುವಂತೆ ಪಟ್ಟುಹಿಡಿದರು. ನಂತರ ಡಿಸಿಪಿ ಅವರು ದೂರು ದಾಖಲಿಸಿಕೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು. ಠಾಣೆಯಲ್ಲಿ ದೂರು ನೀಡಲು ಮುಂದಾದರು.

ಈ ವೇಳೆ ಮಾತನಾಡಿದ ಡಿಸಿಪಿ ಸಾಹಿಲ್ ಬಾಗ್ಲಾ, ಘಟನೆಯ ಬಗ್ಗೆ ದೂರು ಕೊಟ್ಟಿದ್ದಾರೆ, ದೂರು ಪರಿಶೀಲನೆ ಮಾಡುತ್ತೇವೆ. ದೂರಿನ ಪ್ರಕಾರ ಏನು ಕ್ರಮ ಕೈಗೊಳ್ಳಬೇಕಾಗುತ್ತದೆಯೋ ಆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಪ್ರತಿಭಟನೆಗೆ ಕಾಂಗ್ರೆಸ್ ಅನುಮತಿ ವಿಚಾರವಾಗಿ ಮಾತನಾಡಿ, ಪ್ರತಿಭಟನೆ ಮತ್ತು ಮನವಿ ಕೊಡುವ ಬಗ್ಗೆ ಅನುಮತಿ ಪಡೆದಿದ್ದರು. ಆದರೆ ಕೊನೆಗೆ ಕೆಲ ಘಟನೆ ನಡೆದಿದೆ. ದೂರು ಆಧರಿಸಿ ಕ್ರಮ‌ ಕೈಗೊಳ್ಳುತ್ತೇವೆ ಎಂದು ಡಿಸಿಪಿ ಹೇಳಿದರು.