ಬೆಂಗಳೂರು: ನಾಗರಹಾವಿನ ರಕ್ಷಣೆ ಮಾಡುವ ವೇಳೆ ಕಡಿದು ಅಸ್ವಸ್ಥಗೊಂಡು ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸ್ನೇಕ್ ಲೋಕೇಶ್ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಆ.17 ರಂದು ಹಾವು ರಕ್ಷಣೆ ಮಾಡಲು ತೆರಳಿದ್ದರು.ಹಾವು ಹಿಡಿಯುವ ವೇಳೆ ನಾಗರಹಾವು ಬಲಗೈ ಬೆರಳಿಗೆ ಕಚ್ಚಿತ್ತು. ತಕ್ಷಣವೇ ಅವರನ್ನು ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಸಾವಿರಾರು ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಸ್ನೇಕ್ ಲೋಕೇಶ್ ಎಂಬ ಹೆಸರು ಪಡೆದಿದ್ದರು. ಆದರೆ ಯಾವುದೇ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳದೇ ಬರಿಗೈಲಿ ಉರಗ ರಕ್ಷಣೆ ಮಾಡುವಾಗ ಹಾವು ಕಚ್ಟಿದ್ದರಿಂದ ಸಾವನ್ನಪ್ಪಿದ್ದಾರೆ. ಹಾವು ಹಿಡಿಯುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ ಎಂದು ವೈದ್ಯರು ಹೇಳಿದ್ದಾರೆ.
ಲೋಕೇಶ್ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅಲ್ಲದೇ ಧಾರವಾಹಿ, ಚಲನ ಚಿತ್ರಗಳಲ್ಲಿ ಕೂಡ ನಟನೆ ಮಾಡಿದ್ದರು. ನೆಲಮಂಗಲದಲ್ಲಿ ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅವರು ಹಾವು ಕಡಿತದಿಂದ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.