ಮಹಾರಾಷ್ಟ್ರ: ಜಲ್ನಾದಲ್ಲಿ ಬೃಹತ್ ಐಟಿ ದಾಳಿಯಾಗಿದ್ದು, 56 ಕೋಟಿ ನಗದು, 32 ಕೆಜಿ ಚಿನ್ನ, 16 ಕೋಟಿ ಮೌಲ್ಯದ ವಜ್ರ ಸೇರಿ 390 ಕೋಟಿ ಅಕ್ರಮ ಆಸ್ತಿಯನ್ನು ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕೆಲವು ವ್ಯಾಪಾರಿಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 390 ಕೋಟಿ ರೂಗಳಷ್ಟು ಬೇನಾಮಿ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಶಪಡಿಸಿಕೊಂಡ ಸ್ವತ್ತುಗಳಲ್ಲಿ 56 ಕೋಟಿ ರೂ ನಗದು ಮತ್ತು 14 ಕೋಟಿ ರೂ ಮೌಲ್ಯದ 32 ಕೆಜಿ ಚಿನ್ನ, ಮುತ್ತುಗಳು ಮತ್ತು ವಜ್ರಗಳು ಸೇರಿವೆ. ಕೆಲವು ಆಸ್ತಿ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ದಾಳಿಯ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಎರಡು ವ್ಯಾಪಾರ ಗುಂಪುಗಳಿಗೆ ಸೇರಿದ ವಸತಿ ಮತ್ತು ಅಧಿಕೃತ ಜಾಗದಲ್ಲಿ ಆ.1 – 8 ರ ನಡುವೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೀಗ ದಾಳಿಯಲ್ಲಿ ವಶಕ್ಕೆ ಪಡೆಯಲಾದ ಸ್ವತ್ತುಗಳ ಮಾಹಿತಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ದಾಳಿಯ ವೇಳೆ ವಶಪಡಿಸಿಕೊಂಡ ನಗದನ್ನು ನಿಖರವಾಗಿ ಲೆಕ್ಕ ಹಾಕಲು ಸುಮಾರು 13 ಗಂಟೆಗಳು ಬೇಕಾಯಿತು ಎನ್ನಲಾಗಿದೆ.
ಈ ವ್ಯಾಪಾರ ಗುಂಪುಗಳಿಂದ ಆಪಾದಿತ ತೆರಿಗೆ ವಂಚನೆಯ ಬಗ್ಗೆ ಮಾಹಿತಿ ಪಡೆದ ಬಳಿಕ, ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆಗಾಗಿ ರಾಜ್ಯದಾದ್ಯಂತ 260 ಅಧಿಕಾರಿಗಳನ್ನೊಳಗೊಂಡ ಐದು ತಂಡಗಳನ್ನು ರಚಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.