ಶಿರಸಿಗರಿಗೆ ಗುಡ್ ನ್ಯೂಸ್.! ಪೆಟ್ರೋಲ್, ಡಿಸೇಲ್ ದರದಲ್ಲಿ 1 ರೂ. ಇಳಿಕೆ.! ಡಾ. ರವಿಕಿರಣ ಪಟವರ್ಧನ್ ಪತ್ರಕ್ಕೆ ಕೇಂದ್ರ ಸರ್ಕಾರ ಸ್ಪಂದನೆ.!

ಶಿರಸಿ: ಪೆಟ್ರೋಲ್, ಡಿಸೇಲ್ ಬೆಲೆ ರಾಜ್ಯದಲ್ಲಿಯೇ ಶಿರಸಿಯಲ್ಲಿ ಗರಿಷ್ಠವಾಗಿದೆ. ಈ ಕುರಿತಂತೆ ಶಿರಸಿ ವೈದ್ಯರೊಬ್ಬರ ಸಲಹೆ ಸ್ವೀಕರಿಸಿದ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಶಿರಸಿ ಗ್ರಾಹಕರಿಗೆ ಇನ್ನು ಮುಂದೆ ರೂ. 1 ರಷ್ಟು ಇಂಧನ ದರ ಕಡಿಮೆ ಆಗಲಿದೆ.

ಕೇಂದ್ರಕ್ಕೆ ವಿವರವಾದ ಪತ್ರ ಬರೆದಿದ್ದ ಡಾ. ರವಿಕಿರಣ ಪಟವರ್ಧನ್ .!

ಪಟ್ಟಣದ ಖ್ಯಾತ ಆಯುರ್ವೇದ ವೈದ್ಯರಾದ ಡಾ. ರವಿಕಿರಣ ಪಟವರ್ಧನ್ ಕಳೆದ ಜೂನ್ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದಲ್ಲೇ ಶಿರಸಿಯಲ್ಲಿ ಅತಿ ಹೆಚ್ಚು ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಿರುವುದನ್ನ ಉಲ್ಲೇಖಿಸಿ ಪತ್ರ ಬರೆದಿದ್ದರು. ಶಿರಸಿಗೆ ದೂರದ ಮಂಗಳೂರಿನಿಂದ ಇಂಧನ ಪೂರೈಸಲಾಗುತ್ತಿದೆ. ಹೀಗಾಗಿ, ಸಾಗಾಟ ವೆಚ್ಛ ಅನಗತ್ಯವಾಗಿ ಗ್ರಾಹಕರ ಮೇಲೆ ಬೀಳುತ್ತಿರುವ ಅಂಶವನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದರು.

ವೈದ್ಯರ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಲಾ ಸೀತಾರಾಮನ್, ಪೆಟ್ರೋಲಿಯಂ ಸಚಿವಾಲಯಕ್ಕೆ ಈ ಮಾಹಿತಿ ರವಾನಿಸಿ, ಡಾ. ರವಿಕಿರಣ ಅವರಿಗೆ ಹಿಂಬರಹವನ್ನೂ ಕಳಿಸಿಕೊಟ್ಟಿದ್ದರು.

ಈಗ ಇಂಡಿಯನ್ ಆಯಿಲ್ ಕಂಪನಿಯಿಂದ ಡಾ. ಪಟವರ್ಧನ್ ಅವರಿಗೆ ಪ್ರತ್ಯುತ್ತರ ಬಂದಿದ್ದು, ಅದರಲ್ಲಿ ಕೇಂದ್ರ ಸರಕಾರದ ಸೂಚನೆಯಂತೆ ಮಂಗಳೂರಿನಿಂದ ಶಿರಸಿಗೆ ಬರುತ್ತಿದ್ದ ಪೆಟ್ರೋಲ್ ಹಾಗೂ ಡಿಸೇಲ್ ಬದಲಾಗಿ ಹುಬ್ಬಳ್ಳಿಯಿಂದ ಸರಬರಾಜು ಮಾಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಆ ಮೂಲಕ ಶಿರಸಿಯಲ್ಲಿ ಅಂದಾಜು ಪೆಟ್ರೋಲ್ ಪ್ರತಿ ಲೀಟರ್ ಗೆ ರೂ.1.19 ಮತ್ತು ಡೀಸೆಲ್ ರೂ. 1.01 ಗಳಷ್ಟು ಕಡಿಮೆಯಾಗಲಿದೆ.

ಡಾಕ್ಟರ್ ರವಿಕಿರಣ ಪಟವರ್ಧನ್ ಅವರು ತಮ್ಮ ಜನಪರ, ಸಮಾಜಮುಖಿ ಕಾರ್ಯಗಳಿಂದ ನಾಡಿನ ಜನರ ಮನಗೆದ್ದಿದ್ದಾರೆ. ಸರಕಾರದ ಯೋಜನೆಗಳ ಮಾಹಿತಿ, ಸರ್ಕಾರದಿಂದ ಜನರಿಗೆ ಲಭ್ಯವಿರುವ ಇನ್ಸುರೆನ್ಸ್ ಮಾಹಿತಿ, ರಕ್ತದಾನಿಗಳ ಮಾಹಿತಿ ಸೇರಿದಂತೆ ಸಾಕಷ್ಟು ಜನಪರ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಜನರ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವನ್ನೂ ಕಾಳಜಿ ಮಾಡುವ ಡಾಕ್ಟರ್ ರವಿಕಿರಣ ಪಟವರ್ಧನ್ ಅವರ ಕಾರ್ಯ ಶ್ಲಾಘನೀಯ ಎಂಬುದು ಜನಸಾಮಾನ್ಯರ ಮಾತಾಗಿದೆ.