ಎಂದೂ ಕೇಳಿಲ್ಲದ ಸುದ್ದಿಗೆ ಸಾಕ್ಷಿಯಾದ ಜೋಯಿಡಾ.! ಬಸ್ ತಂಗುದಾಣವೇ ನಾಪತ್ತೆ.?

ಕಾರವಾರ: ಸಣ್ಣಪುಟ್ಟ ವಸ್ತುಗಳು, ಮನೆ, ಅಂಗಡಿಗಳ ಕಳ್ಳತನದ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಆದರೆ
ಪ್ರಯಾಣಿಕರ ಆಶ್ರಯಕ್ಕಾಗಿ ನಿರ್ಮಿಸಿದ ಬಸ್ ತಂಗುದಾಣವನ್ನೇ ಕದ್ದು ನಾಪತ್ತೆ ಮಾಡಿರುವ ಬಗ್ಗೆ ಎಂದಾದರೂ
ಕೇಳಿದ್ದೀರಾ.? ಇಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ತಿನೈಘಾಟ ಸಮೀಪದ ಪಿರೆಗಾಳಿಯಲ್ಲಿ ನಡೆದಿದೆ.

ಜೋಯಿಡಾ ತಾಲೂಕಿನ ಹಲವು ಕಡೆ ರೂಡ್ ಸೆಟ್ ಸಂಸ್ಥೆಯವರು ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಿದ್ದರು. ಅದರಂತೆ ಮೂರು ವರ್ಷದ ಹಿಂದೆ ಎರಡು ಲಕ್ಷ ವೆಚ್ಚದಲ್ಲಿ ಕಬ್ಬಿಣದ ಪೈಪ್ ಹಾಗೂ ಸ್ಟೀಲ್ ಕಂಬಿಗಳನ್ನು ಬಳಸಿ ತಿನೈಘಾಟ್ ನ ಪಿರೆಗಾಳಿ ಗ್ರಾಮದಲ್ಲಿ ಸಹ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದರು.

ಆದರೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಾರಂಭವಾದ ನಂತರ ಬಸ್ ನಿಲ್ದಾಣ ಮುಖ್ಯರಸ್ತೆಯಿಂದ ದೂರವಾಗಿತ್ತು. ಹೀಗಾಗಿ ಈ ನಿಲ್ದಾಣಕ್ಕೆ ಪ್ರಯಾಣಿಕರು ಬಂದು ನಿಲ್ಲುತ್ತಿರಲಿಲ್ಲ. ಈ ಅವಕಾಶವನ್ನು ಬಳಸಿಕೊಂಡ ಕಳ್ಳರು ನಿಲ್ದಾಣದ ಕಬ್ಬಿಣದ ಪೈಪ್ ಸೇರಿ ನೆಲಕ್ಕೆ ಹಾಕಿದ ಟೈಲ್ಸ್ ಸಹ ಬಿಡದೇ ಇಡೀ ನಿಲ್ದಾಣವನ್ನು ಕದ್ದು ಪರಾರಿಯಾಗಿದ್ದಾರೆ. ಇನ್ನು ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಹಾಕಿದ ಕಬ್ಬಿಣವನ್ನು ಸಹ ಕಳ್ಳರು ಕದ್ದೊಯ್ದಿದ್ದಾರೆ. ಆದರೇ ಈ ಬಗ್ಗೆ ಸ್ಥಳೀಯರಾಗಲೀ ಗ್ರಾಮ ಪಂಚಾಯಿತಿಯವರಾಗಲೀ ದೂರು ಸಹ ನೀಡದಿರುವುದು ಕಳ್ಳರಿಗೆ ರತ್ನಗಂಬಳಿ ಹಾಸಿಕೊಟ್ಟಂತಾಗಿದೆ.