ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ಮಾತಿನ ಜಟಾಪಟಿ

ದಾಂಡೇಲಿ: ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆದು ಸದಸ್ಯನ ಕ್ಷಮಾಪಣೆ ಯೊಂದಿಗೆ ಸುಖಾಂತ್ಯ ಕಂಡಿದೆ. ದಾಂಡೇಲಿ ನಗರಸಭೆಯಲ್ಲಿ ಶುಕ್ರವಾರ ನಡೆದ ಅಜೆಂಡಾ ಸಭೆಯಲ್ಲಿ ಈ ಘಟನೆ ನಡೆದಿದೆ.

ಬಿಜೆಪಿ ಸದಸ್ಯರಾದ ರೋಷನ್ ಜೀತ, ವಿಜಯ ಕೋಲೆಕರ, ಪದ್ಮಜಾ ಜನ್ನು ಮತ್ತು ರಮಾ ರವೀಂದ್ರ ಅವರು ನಗರಸಭೆಯ ಠರಾವು ಪ್ರತಿಗಳಲ್ಲಿ ನಮ್ಮ ಹೇಳಿಕೆಗಳು ದಾಖಲಾಗುತ್ತಿಲ್ಲ ಎಂದು ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಅವರೊಂದಿಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಕೊಠಡಿಗೆ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ ಹಾಗೂ ನಗರಸಭೆ ಸದಸ್ಯರಾದ ಆಶ್ಪಾಕ್ ಶೇಖ್ ಮತ್ತು ಅಸೀಪ್ ಮುಜಾವರ ಆಗಮಿಸಿ ಚರ್ಚೆಗೆ ಕುಳಿತುಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರಸಭೆ ಸದಸ್ಯ ಅಸೀಫ ಮುಜಾವರ ಬಿಜೆಪಿ ನಗರಸಭೆ ಸದಸ್ಯ ರೋಷನ್ ಜೀತ ಅವರ ಮಧ್ಯೆ ವಾಗ್ವಾದ ನಡೆಯಿತು.

ಕಾಂಗ್ರೆಸ್ ಸದಸ್ಯ ಅಸೀಫ ಮುಜಾವರ ಹೇಳಿಕೆಗೆ ಬಿಜೆಪಿ ಸದಸ್ಯ ರೋಷನ್ ಜೀತ ಸಹಿತ ಉಳಿದ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ಪೌರಾಯುಕ್ತರೊಂದಿಗೆ ಚರ್ಚೆ ನಡೆಸುವಾಗ ಮಧ್ಯೆ ಪ್ರವೇಶಿಸಿ ಅನುಚಿತ ವರ್ತನೆ ತೋರಿದ್ದನ್ನ ಬಲವಾಗಿ ಖಂಡಿಸಿ ಕ್ಷಮಾಪಣೆ ಕೇಳಬೇಕೆಂದು ಪಟ್ಟು ಹಿಡಿದರು. ನಗರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ ನಂತರ ಪೌರಾಯುಕ್ತರ ಕಛೇರಿಯಲ್ಲಿ ವಾಗ್ಯುದ್ಧ ನಡೆಯಿತು.

ಪರಿಸ್ಥಿತಿ ಕೈಮಿರಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಪಿಎಸ್ಐ ಕಿರಣ ಪಾಟೀಲ ಭೇಟಿ ನೀಡಿ ಪೌರಾಯುಕ್ತರ ಕಚೇರಿಯಲ್ಲಿ ಸಂಧಾನಕ್ಕೆ ಪ್ರಯತ್ನಿಸಿದರು. ಕಾಂಗ್ರೆಸ್ ನಗರಸಭಾ ಸದಸ್ಯ ಅಸೀಫ್ ಮುಜಾವರ ಬಿಜೆಪಿ ಸದಸ್ಯ ರೊಷನ್ ಜೀತ ಅವರ ಬಳಿ ಕ್ಷಮಾಪಣೆ ಕೇಳಿದ ಬಳಿಕ ಬಿಜೆಪಿ ಕಾಂಗ್ರೆಸ್ ನಡುವಿನ ಜಟಾಪಟಿ ಅಂತ್ಯಗೊಂಡಿತು.