ಬೆಂಗಳೂರಿನ ಅನುಗ್ರಹ ಲೇಔಟ್ ಜಲದಿಗ್ಭಂಧನ.! 20 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರ.! ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಹಿಡಿಶಾಪ.!

ಬೆಂಗಳೂರು: ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ಪಕ್ಕದ ರಾಜಕಾಲುವೆ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ನಿವಾಸಿಗಳು ಜಲದಿಗ್ಭಂಧನದಲ್ಲಿ ಸಿಲುಕಿಕೊಂಡಿದ್ದಾರೆ. 20ಕ್ಕೂ ಹೆಚ್ಚು ಮನೆಗಳಿಗೆ ನಿನ್ನೆ ಸುರಿದ ಭಾರೀ ಮಳೆ ಕಂಟಕವಾಗಿ ಪರಿಣಮಿಸಿದೆ.

ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ನಿನ್ನೆ ರಾತ್ರಿಯಿಡೀ ನಿದ್ದೆ ಮಾಡದೇ ಜಾಗರಣೆ ಮಾಡುವಂತಾಯಿತು. ಮನೆಯಿಂದ ಹೊರ ಬರಲಾಗದೇ ಅಗತ್ಯ ಸಾಮಾಗ್ರಿಗಳ ಖರೀದಿಗೆ ಬೈಕ್ ನಲ್ಲಿ ಸರ್ಕಸ್ ಮಾಡಿ ತೆರಳುವ ಸ್ಥಿತಿ ಎದುರಾಗಿದೆ. ಹೀಗಾಗಿ ಆನ್ ಲೈನ್ ಮೂಲಕ ಅಗತ್ಯ ಸಾಮಾಗ್ರಿಗಳ ತರಿಸಿಕೊಳ್ತಿದ್ದಾರೆ. ಇಷ್ಟೆಲ್ಲಾ ಅವಘಡಗಳಾದರೂ ಸ್ಥಳಕ್ಕೆ ಬಾರದ ಬಿಬಿಎಂಪಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕಿದರು.

ಹಲವು ವರ್ಷದಿಂಗಳಿಂದ ಈ ಭಾಗದಲ್ಲಿ ಸಮಸ್ಯೆ ಇದೆ. ನಮಗೆ ತಾತ್ಕಾಲಿಕ ಪರಿಹಾರ ಬೇಡ, ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು. ಇಲ್ಲವಾದ್ರೆ ಬನ್ನೇರುಘಟ್ಟ ರಸ್ತೆ ತಡೆದು ಪ್ರತಿಭಟನೆ ಮಾಡ್ತೀವಿ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅನುಗ್ರಹ ಲೇಔಟ್ ಗೆ ಆಗಮಿಸಿದ ಅಗ್ನಿಶಾಮಕ ವಾಹನ ಆಗಮಿಸಿದ್ದು, ಮನೆ ಮುಂಭಾಗ ನಿಂತಿದ್ದ ನೀರನ್ನ ಹೊರ ಹಾಕುವ ಕಾರ್ಯ ಆರಂಭವಾಗಿದೆ.