ಚಿನ್ನ ಕಳ್ಳ ಸಾಗಾಣಿಕೆಗೆ ಯತ್ನ.! ಆರು ಜನರ ಬಂಧನ.!

ಮಹಾರಾಷ್ಟ್ರ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಾಣಿಕೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಆರು ಮಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಭಾನುವಾರ ಬಂಧನ ಮಾಡಿದ್ದಾರೆ.

ಈ ವೇಳೆ 12 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆದಿದ್ದು, ಇದರ ಮೌಲ್ಯ ಅಂದಾಜು 5.38 ಕೋಟಿ ರೂ. ಆಗಿದೆ. ಬಂಧಿತರಲ್ಲಿ ಸುಡಾನ್ ಪ್ರಜೆ ಸಹ ಸೇರಿದ್ದಾನೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಲ್ಟ್ ಮೂಲಕ ಸುಡಾನ್ ಪ್ರಜೆ ಚಿನ್ನ ಕಳ್ಳ ಸಾಗಣೆಗೆ ಯತ್ನಿಸಿದ್ದಾನೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿಯಲ್ಲಿ ತಿಳಿಸಿದ್ದಾರೆ.

ಕೆಲವು ಪ್ರಯಾಣಿಕರು ಆತನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಲು ಗಲಾಟೆಯನ್ನು ಸೃಷ್ಟಿಸಿದ್ದರು. ಈ ಕುರಿತು ಬಂಧಿತ ಆರು ಜನರ ವಿರುದ್ಧ ಕಸ್ಟಮ್ಸ್ ಕಾಯ್ದೆ ಸೆಕ್ಷನ್ 110 ರ ಅಡಿಯಲ್ಲಿ ಚಿನ್ನ ಕಳ್ಳ ಸಾಗಣೆ ಪ್ರಕರಣ ದಾಖಲಿಸಲಾಗಿದೆ.