ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ 6 ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಕಾರವಾರ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಹಲವಾರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು ಕಳೆದ ಆಗಸ್ಟ್ ತಿಂಗಳೊಂದರಲ್ಲೇ ಜಿಲ್ಲೆಯ ಒಟ್ಟೂ ಇಂತಹ 7 ಪ್ರಕರಣಗಳಲ್ಲಿನ 6 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ವರ್ಷಗಳಿಂದ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವ ಎಲ್.ಪಿ.ಸಿ. ಪ್ರಕರಣಗಳನ್ನು ಪತ್ತೆ ಹಚ್ಚುವ ಬಗ್ಗೆ ಜಿಲ್ಲೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎಸ್.ಪಿ. ಡಾ. ಸುಮನ್ ಪೆನ್ನೇಕರ ಸೂಚನೆ ನೀಡಿ ಈ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಅದರಂತೆ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಆಗಸ್ಟ್ ತಿಂಗಳೊಂದರಲ್ಲೇ ಕಾರವಾರ ತಾಲೂಕಿನ 5, ಭಟ್ಕಳ 1 ಹಾಗೂ ಕುಮಟಾ 1 ಸೇರಿ ಒಟ್ಟೂ 7 ಪ್ರಕರಣಗಳಲ್ಲಿ 6 ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 1978 ರ ಏ.19 ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದೇವರಹಿತ್ಲುವಿನ ಈಶ್ವರ ಮಾಣಿ ನಾಯ್ಕ ಈತನನ್ನು 44 ವರ್ಷದ ಬಳಿಕ ಆ.22 ರಂದು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ 1995 ರ ಆ.17 ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಂಕೋಲಾ ತಾಲೂಕಿನ ಹೊಸಗದ್ದೆಯ ಮುತ್ತು ಪಾಂಡು ಮುದಲಿಯಾರ್ ಎಂಬಾತನನ್ನು 27 ವರ್ಷಗಳ ಬಳಿಕ ಆ.24 ರಂದು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಇನ್ನು ಕಾರವಾರ ತಾಲೂಕಿನಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ 2001 ರ ಜು.26 ರಂದು ಹಾಗೂ 2001ರ ನ.18 ರಂದು ದಾಖಲಾಗಿದ್ದ 2 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಧಾರವಾಡ ಜಿಲ್ಲೆಯ ಅಳ್ನಾವರದ ಹಸ್ಮತ ಮೊಹಮ್ಮದ ಇಸೂಕ ತೊಲಗಿ ಎಂಬಾತನನ್ನು 21 ವರ್ಷಗಳ ಬಳಿಕ ಆ.8 ರಂದು ಪತ್ತೆ ಹಚ್ಚಲಾಗಿದೆ.
ಕದ್ರಾ ಪೊಲೀಸ್ ಠಾಣೆಯಲ್ಲಿ 2008ರ ಅ.20 ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಸ್ನೋಟಿಯ ಸಂಶುದ್ದೀನ ಪೀರ್ ಸಾಬ್ ಸುಳ್ಯದ ಎಂಬಾತನನ್ನು 14 ವರ್ಷಗಳ ಬಳಿಕ ಆ.19 ರಂದು ಪತ್ತೆ ಹಚ್ಚಲಾಗಿದೆ.

ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ 1988 ರ ಮಾ.6 ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜೇಮ್ಸ್ ಥಾಮಸ್ ಎಂಬಾತನನ್ನು 34 ವರ್ಷಗಳ ಬಳಿಕ ಆ.19 ರಂದು ಪತ್ತೆ ಹಚ್ಚಲಾಗಿದೆ. ಇನ್ನು ಕಾರವಾರ ಶಹರ ಪೊಲೀಸ್ ಠಾಣೆಗೆ ಸಂಬಂಧಿಸಿದಂತೆ 2011 ರ ಮಾ.11 ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸದ್ಯ ಕಾರವಾರದ ಕೋಣೆವಾಡದಲ್ಲಿರುವ ಮೂಲತಃ ಅಂಕೋಲಾ ಮೀನುಮಾರುಕಟ್ಟೆ ಬಳಿಯ ನಿವಾಸಿ ಮುಕುಂದ ಮುದುಕಪ್ಪಾ ವಡ್ಡರ ಎಂಬಾತನನ್ನು 11 ವರ್ಷದ ಬಳಿಕ ಆ.24 ರಂದು ಪತ್ತೆ ಹಚ್ಚಲಾಗಿದೆ.

ಈ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ ಅವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.