ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತಿದ್ದ ಆರೋಪಿ ಬಂಧನ

ಕಾರವಾರ: ಅಕ್ರಮವಾಗಿ ತನ್ನ ಮನೆಯಲ್ಲಿ ನಾಡ ಬಂದೂಕನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿರುವ ಘಟನೆ ತಾಲೂಕಿನ ಗೋಪಶಿಟ್ಟ, ಬರ್ನಾವಾಡ ಗ್ರಾಮದಲ್ಲಿ ನಡೆದಿದೆ.
ಬರ್ನಾವಾಡ ಗ್ರಾಮದ ಸಂಜು ವಿನಾಯಕ ಆಚಾರಿ ಬಂಧಿತ ಆರೋಪಿಯಾಗಿದ್ದಾನೆ.

ಖಚಿತ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ ಅವರ ನಿರ್ದೇಶನದಲ್ಲಿ ಅಡಿಶನಲ್ ಎಸ್‌ಪಿ ಬದರಿನಾಥ ಅವರ ಮಾರ್ಗದರ್ಶನದಲ್ಲಿ ರಚಿಸಲಾದ ವಿಶೇಷ ತಂಡವು ತಾಲೂಕಿನ ಗೋಪಶಿಟ್ಟ ಬರ್ನಾವಾಡದ ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಮನೆಯ ಹಿಂದೆ ಇರುವ ತಗಡಿನ ಶೆಡ್ ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಒಂಟಿ ನಳಿಕೆಯ ನಾಡ ಬಂದೂಕನ್ನು ತಯಾರಿಸಿ ಇಟ್ಟಿದ್ದು ಅದನ್ನು ತಯಾರಿಸಲು ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಂಡು ಆರೋಪಿತನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ವಿಶೇಷ ವಿಭಾಗದ ಪಿ.ಎಸ್.ಐ. ಪ್ರೇಮನಗೌಡ ಪಾಟೀಲ್, ಚಿತ್ತಾಕುಲ ಪಿ.ಎಸ್.ಐ. ವಿಶ್ವನಾಥ ನಿಂಗೊಳ್ಳಿ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ ಜಿ, ಗುರುರಾಜ ನಾಯ್ಕ, ಭಗವಾನ ಗಾಂವಕರ, ಸಂತೋಷ ಕೆ. ಬಿ. ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎಸ್.ಪಿ. ಅವರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.