ಕಾರವಾರ: ನಗರದ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಉತ್ತರಕನ್ನಡ ಜಿಲ್ಲಾ ಮಟ್ಟದ ‘ಥಟ್ ಅಂತ ಹೇಳಿ’ ಸರ್. ಸಿ. ವಿ. ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉ.ಕ ಹಾಗೂ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ಕಾರವಾರ ಇವರ ಸಂಯುಕ್ತಾಶ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಪಯೋಜನಾ ಸಮನ್ವಯ ಅಧಿಕಾರಿ ಲತಾ ನಾಯಕ ಮಾತನಾಡಿ ಪ್ರತಿಯೊಬ್ಬ ಮಗುವಿಗೂ ನಿರ್ದಿಷ್ಟವಾದ ಗುರಿ ಇರಬೇಕು ಇಂದಿನ ಸ್ಪರ್ಧಾತ್ಮಕ ಹಾಗೂ ವಿಜ್ಞಾನಯುಗದಲ್ಲಿ ಯಾವುದೇ ಮಾಹಿತಿಯನ್ನಾದರೂ ಕುಳಿತಲ್ಲಿಯೇ ಇಂಟರ್‌ನೆಟ್ ಸೌಲಭ್ಯದಿಂದ ತಕ್ಷಣದಲ್ಲಿ ಪಡೆದುಕೊಳ್ಳುವ ಅವಕಾಶಗಳು ಮಕ್ಕಳಿಗೆ ಇದ್ದುಅದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಸಹಾಯಕ ಎಂದು ಹೇಳಿದರು.
ಕೇಣಿ ಸರಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಸುಧೀರ ಡಿ. ನಾಯಕ ಮಾತನಾಡಿ ಪ್ರತಿವರ್ಷ ಸ್ಪರ್ಧೆಗಳು ನಡೆಯುವುದರಿಂದ ಆಯ್ಕೆಯಾಗದ ವಿದ್ಯಾರ್ಥಿಗಳು ಬೇಸರ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಪ್ರಶ್ನೆಗಳನ್ನು ಸೃಷ್ಟಿ ಮಾಡುವುದನ್ನು ಕಲಿಯಬೇಕು. ಅಂದಾಗ ಜ್ಞಾನ ಹೆಚ್ಚಾಗುತ್ತದೆ ಎಂದು ಹೇಳಿದರು.
ಇದೇ ವೇಳೆಯಲ್ಲಿ ವಿಜ್ಞಾನ ರಸಪ್ರಶ್ನೆಯಲ್ಲಿ ಪ್ರಥಮ ಬಹುಮಾನ ಪಡೆದ ಹೊನ್ನಾವರ ತಾಲೂಕಿನ ಶ್ರೀ ಚೆನ್ನಕೇಶವ ಫ್ರೌಢಶಾಲೆ ಕರ್ಕಿಯ ವಿದ್ಯಾರ್ಥಿಗಳಾದ ತುಷಾರ್ ಕೇಶವ ನಾಯ್ಕ ಹಾಗೂ ಪವಿತ್ರ ಲಕ್ಷ್ಮೀಶ ನಾಯ್ಕ ಮತ್ತು ದ್ವಿತೀಯ ಬಹುಮಾನ ಪಡೆದ ಅಂಕೋಲಾ ತಾಲೂಕಿನ ಹಿಮಾಲಯ ಶಾಲೆಯ ವಿದ್ಯಾರ್ಥಿಗಳಾದ ರಕ್ಷಾ ಹರಿಕಾಂತ ಹಾಗೂ ನಿಹಾರಿಕಾ ನಾಯಕ ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರೇಗುತ್ತಿ ಸೆಕೆಂಡರಿ ಸ್ಕೂಲ್ ವಿಜ್ಞಾನ ಶಿಕ್ಷಕ ಮಹಾದೇವ ಬಿ. ಗೌಡ, ವಿದ್ಯಾರ್ಥಿಗಳು ಹಾಗೂ ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.