ಖಡ್ಗದ ಶಕ್ತಿಗಿಂತ ಕರುಣೆಯ ಶಕ್ತಿ ಹೆಚ್ಚು: ರಾಘವೇಶ್ವರ ಶ್ರೀ

ಗೋಕರ್ಣ: ಕರವಾಳದ ಶಕ್ತಿಗಿಂತ ಕರುಣೆಯ ಶಕ್ತಿ ಅಧಿಕ. ದುಷ್ಟತನ, ಕ್ರೌರ್ಯದ ಸಂಕೇತವೇ ಆಗಿದ್ದ ಅಂಗುಲಿಮಾಲನಂಥವನನ್ನೂ ಪರಿವರ್ತಿಸಿದ್ದು, ಬುದ್ಧನ ಅಪೂರ್ವ ಕರುಣಾ ಶಕ್ತಿ. ಇಂಥ ಶಕ್ತಿ ಜಗತ್ತನ್ನು ಆಳುವಂತಾಗಬೇಕು. ನಮ್ಮೆಲ್ಲರ ಹೃದಯವನ್ನು ಕರುಣೆ ಆಳುವಂತಾಗಬೇಕು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು ರಾಮನ ಕಾರ್ಮುಖ (ಧನಸ್ಸು), ಕೃಷ್ಣನ ಯುಕ್ತಿ ಮತ್ತು ಬುದ್ಧನ ಕಾರುಣ್ಯ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ ಎಂದು ಬಣ್ಣಿಸಿದರು.

ಬುದ್ಧ ಹಾಗೂ ಅಂಗುಲಿಮಾಲ ಒಮ್ಮೆ ಪರಸ್ಪರ ಭೇಟಿಯಾಗುತ್ತಾರೆ. ಅಂಗುಲಿಮಾಲ ಕರವಾಳದ ಸಂಕೇತ. ಬುದ್ಧ ಕರುಣೆಯ ಸಂಕೇತ. ಬುದ್ಧ ಅಂಗುಲಿಮಾಲನ ಪ್ರದೇಶ ಪ್ರವೇಶಿಸುತ್ತಿದ್ದಂತೆಯೇ ಅಂಗುಲಿಮಾಲ ಆತನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಾನೆ. ಕೊಲ್ಲಲು ಮುಂದಾದ ಅಂಗುಲಿಮಾಲ ಬುದ್ಧನಲ್ಲಿ ಕೊನೆಯ ಆಸೆ ಏನೆಂದು ಕೇಳುತ್ತಾನೆ. ಆಗ ಅಪೇಕ್ಷೆಯ ಎರಡು ಭಾಗವಿದೆ. ಒಂದನೆಯದಾಗಿ ಎದುರು ಇರುವ ಮರದ ಕೊಂಬೆಯ ಮುರಿಯಬೇಕು ಎನ್ನುತ್ತಾನೆ. ಆಗ ಅಂಗುಲಿಮಾಲ ಸುಲಭವಾಗಿ ಮುರಿಯುತ್ತಾನೆ. ಅಪೇಕ್ಷೆಯ ಎರಡನೇ ಭಾಗವಾಗಿ ಕೊಂಬೆಯನ್ನು ಮರಳಿ ಜೋಡಿಸುವಂತೆ ಕೋರುತ್ತಾನೆ. ಆಗದು ಎಂದು ಅಂಗುಲಿಮಾಲ ಹೇಳಿದಾಗ, ಶ್ರೇಷ್ಠತೆ ಇರುವುದು ಜೀವ ತೆಗೆಯುವುದರಲ್ಲಿ ಅಲ್ಲ; ಜೀವ ನೀಡುವುದರಲ್ಲಿ ಎಂದು ಬುದ್ಧ ಹೇಳುತ್ತಾನೆ. ಈ ಘಟನೆ ಅಂಗುಲಿಮಾಲನನ್ನು ಭಿಕ್ಷುವಾಗಿ ಪರಿವರ್ತಿಸುತ್ತದೆ ಎಂದರು.

ರಾಜರಿಗಿಂತ ಋಷಿ ಮುನಿಗಳು ಶ್ರೇಷ್ಠರು. ರಾಜನ ಸೈನಿಕರ ಶಕ್ತಿಗಿಂತ ಋಷಿ ಮುನಿಗಳ ಕರುಣೆಯ ಸಾಮಥ್ರ್ಯ ಹೆಚ್ಚು. ಈ ಕಾರಣದಿಂದಲೇ ಎಂಥ ಶಕ್ತಿ ಸಾಮಥ್ರ್ಯ, ಸೇನಾ ಬಲ ಹೊಂದಿದ ರಾಜರಾದರೂ ಮುನಿಶ್ರೇಷ್ಠರಿಗೆ ತಲೆ ಬಾಗುತ್ತಿದ್ದರು ಎಂದು ವಿವರಿಸಿದರು.

ಮಂಗಳೂರು ಮಂಡಲದ ಕುಂದಾಪುರ, ಕೇಪು, ವಿಟ್ಲ, ಕಲ್ಲಡ್ಕ ವಲಯದ ವತಿಯಿಂದ ಸರ್ವಸೇವೆ ನೆರವೇರಿತು. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರು ಶುಕ್ರವಾರ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.