ಗರಿಗರಿ ಚಕ್ಕುಲಿಯ ಘಮ.! ಮನಸೆಳೆದ ‘ತ್ರಿವರ್ಣ’ ಚಕ್ಕುಲಿ, ಗಣೇಶನ ಚಕ್ಕುಲಿ.! ಇದು ಮಲೆನಾಡಿನ ಚಕ್ಲಿ ಕಂಬಳದ ವಿಶೇಷ

ಶಿರಸಿ: ನಗರದ ಕದಂಬ ಸಾವಯವ ಒಕ್ಕೂಟದಲ್ಲಿ ಶನಿವಾರ ಸಂಜೆ ಗರಿಗರಿ ಚಕ್ಕುಲಿಯ ಪರಿಮಳ ಪಸರಿಸಿತ್ತು. ತಾಲೂಕಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಮಹಿಳೆಯರು ಅಲ್ಲಿಯೇ ಚಕ್ಕುಲಿ ತಯಾರಿಸಿ ಆಗಮಿಸಿದವರಿಗೆ ನೀಡುತ್ತಿದ್ದರು.

ಸ್ಥಳೀಯ ಖಾದ್ಯವನ್ನು ಸಾವಯವ ಮಾದರಿಯಲ್ಲಿ ತಯಾರಿಕೆ ಉತ್ತೇಜನಕ್ಕಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧಾಳುಗಳಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಬಿಂಬಿಸುವ ಅಥವಾ ಗಣೇಶೋತ್ಸವವನ್ನು ಬಿಂಬಿಸುವ ಚಕ್ಕುಲಿ ತಯಾರಿಸಲು ಸೂಚಿಸಲಾಗಿತ್ತು. ನೈಸರ್ಗಿಕ ಬಣ್ಣ ಬಳಸಿ ಧ್ವಜದ ಮಾದರಿಯ ಚಕ್ಕುಲಿಗಳು, ಗಣಪತಿ ಮೂರ್ತಿ ಚಕ್ಕುಲಿಗಳನ್ನು ಮಹಿಳೆಯರು ತಯಾರಿಸಿದ್ದರು. ತಾಲೂಕಿನ ತುಂಬೆಮನೆಯ ವೀಣಾ ಸುಬ್ರಾಯ ಹೆಗಡೆ ಕೈ ಚಕ್ಕುಲಿ ಸ್ಥಳದಲ್ಲಿಯೇ ನಿರ್ಮಿಸಿ ಗಮನ ಸೆಳೆದರೆ, ಶಿರಸಿಮಕ್ಕಿಯ ಜಯಲಕ್ಷ್ಮೀ ಹೆಗಡೆ ಚಕ್ಕುಲಿಯಲ್ಲಿಯೇ ಗಣಪನನ್ನ ತಯಾರಿಸಿದ್ದರು.

ಸಾವಯವ ಒಕ್ಕೂಟ ಸಿದ್ಧಪಡಿಸಿರುವ ಪಂಚ ಖಾದ್ಯ ಕಿಟ್ ಉದ್ಘಾಟಿಸಿ ಮಾತನಾಡಿದ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ, ‘ಚೌತಿಯ ತಿಂಡಿಗಳು ಮಲೆನಾಡಿನ ಹೆಗ್ಗುರುತು ಇದು. ಮಲೆನಾಡಿನ ಚಕ್ಲಿ ಕಂಬಳ ಎಂದರೆ ಹಳ್ಳಿಯ ಎಲ್ಲರೂ ಸೇರಿ ಆಚರಿಸುತ್ತಿದ್ದ ಒಂದು ಹಬ್ಬವಾಗುತ್ತಿತ್ತು. ನಮ್ಮನ್ನೆಲ್ಲ ಒಂದು ಮಾಡುವ ಶಕ್ತಿ ಈ ಚೌತಿಯ ತಿಂಡಿಗಳಿಗಿವೆ’ ಎಂದರು.

ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಕೋಟೆಮನೆ ಮಾತನಾಡಿ, ಆಧುನಿಕ ಜೀವನ ಪದ್ಧತಿಯ ಇತ್ತೀಚಿನ ದಿನಗಳಲ್ಲಿ ಚೌತಿಯ ಖಾದ್ಯ ತಯಾರಿಸಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಚೌತಿ ಖಾದ್ಯಗಳನ್ನು ಒಳಗೊಂಡ ಪಂಚ ಖಾದ್ಯ ಕಿಟ್ ಸಿದ್ಧಪಡಿಸಿದ್ದೇವೆ. ಜಿಲ್ಲೆಯಲ್ಲಿ ಮಹಿಳೆಯರಿಗೆ ಗೃಹ ಉತ್ಪನ್ನ ತಯಾರಿಕೆಗೆ ಉತ್ತಮ ಅವಕಾಶವಿದೆ. ಅದರ ಮೌಲ್ಯ ವರ್ಧನೆ ಮಾಡಿ ಮಾರುಕಟ್ಟೆ ಮಾಡಬೇಕಿದೆ. ನೈಸರ್ಗಿಕ, ಸಾವಯವ ವಿಧಾನದಲ್ಲಿ ತಯಾರಿಸಿದ ಖಾದ್ಯಗಳಿಗೆ ನಾವು ಉತ್ತೇಜನ ನೀಡುತ್ತಿದ್ದೇವೆ. 50 ಕ್ಕೂ ಅಧಿಕ ಉತ್ಪನ್ನಗಳನ್ನು ನಾವು ಮಾರುಕಟ್ಟೆ ಮಾಡುತ್ತಿದ್ದೇವೆ ಎಂದರು.

ಕೃಷಿ ಇಲಾಖೆ ಅಧಿಕಾರಿ ನಟರಾಜ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶ್ರೀಪಾದ ರಾಯ್ಸದ್, ಗುರುಪಾದ ಹೆಗಡೆ ಬೊಮ್ನಳ್ಳಿ ಇತರರಿದ್ದರು.