ಹೊನ್ನಾವರ: ಪಟ್ಟಣದ ನಾಮಧಾರಿ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 107 ನೇ ಜನ್ಮ ದಿನಾಚರಣೆ ಹಾಗೂ ‘ಅರಸು ಸ್ಮರಣೆ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸಿ.ಎಂ ಡಾ.ವೀರಪ್ಪ ಮೋಯ್ಲಿ ಮಾತನಾಡಿ, ಅರಸು ವಿಚಾರಧಾರೆಯಲ್ಲಿ ಬದ್ದತೆ ಇತ್ತು. ಆದ್ದರಿಂದ ಇಂದಿರಾಗಾಂಧಿಯವರು ಅವರನ್ನು ಗುರುತಿಸಿದ್ದರು. ಅವರ ನಂಬಿಕೆ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ನಮ್ಮಂತವರು ಸಾಮಾಜಿಕ, ರಾಜಕೀಯ ಮುಖ್ಯವಾಹಿನಿಗೆ ಬರಲು ಅರಸುರವರೇ ಕಾರಣ ಎಂದು ಸ್ಮರಿಸಿದರು. ಇಂದು ಜಾಗತೀಕರಣದ ಪ್ರಭಾವದಿಂದ ಹಿಂದುಳಿದ ವರ್ಗ ಅಲ್ಪ ಸಂಖ್ಯಾತರಿಗೆ ಅವಕಾಶಗಳು ವಂಚಿತವಾಗಿದೆ. 90 ರ ದಶಕದ ಹಿಂದುಳಿದ ವರ್ಗದವರ ಹೋರಾಟದ ಕಾವು ತಣ್ಣಗಾಗಿದೆ. ಸಾಮಾಜಿಕ ನ್ಯಾಯ ಎಂಬುದು ಸಾಮಾನ್ಯ ನ್ಯಾಯವಾಗಿದೆ. ಬಂಡವಾಳ ಶಾಹಿ, ಸಾಮಾಜಿಕ ಶೋಷಣೆ ಇನ್ನೊಂದು ಮಾರ್ಗದ ಮೂಲಕ ಬಂದಿದೆ. ಮತ್ತಷ್ಟು ದಾಸ್ಯದಲ್ಲಿ ಬದುಕಬೇಕಾದ ಸ್ಥಿತಿ ಉದ್ಭವವಾಗಿದೆ. ಜನತೆ ಎಚ್ಚೆತ್ತುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದರು.
ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಇಂದು ಮಾಧ್ಯಮಕ್ಕೆ ಜನಿವಾರ ಹಾಕಲಾಗಿದ್ದು, ಸಂಪೂರ್ಣ ಬದಲಾಗಿದೆ. ಕೋಮುವಾದ ಬಿತ್ತುವ ಮೂಲಕ ವಿಜ್ರಂಭಿಸುತ್ತಿದೆ ಎಂದರು. ಅರಸುರವರು ಭೂ ಸುಧಾರಣಾ ಕಾಯಿದೆ ಜಾರಿ ತಂದವರು. ಇಂದು ಸಾಮಾಜಿಕ ನ್ಯಾಯ ಹಿಂದುಳಿದ ವರ್ಗದವರ ಪರವಾಗಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಆರ್ ಎನ್ ನಾಯ್ಕ ಮಾತನಾಡಿ, ಅರಸುರವರ ವಿಚಾರಧಾರೆಯ ಅರಿವು ಇಂದಿನ ಯುವಕರಿಗೆ ಬರಬೇಕು. ಮಾಜಿ ಸಿಎಂ ಬಂಗಾರಪ್ಪನವರು ಜಾರಿ ತಂದ ಯೋಜನೆಗಳೆಲ್ಲಾಅರಸುರವರಿಂದ ಪ್ರೇರೇಪಣೆಯಾಗಿದೆ ಎಂದರು.
ಗಣ್ಯರಿಗೆ ಸನ್ಮಾನ
ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ, ಉತ್ತರ ಕನ್ನಡ ಇವರ ವತಿಯಿಂದ ಸತತ 25 ವರ್ಷಗಳ ಕಾಲ ಗ್ರಾ.ಪಂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಭಟ್ಕಳ ಬೆಂಗ್ರೆಯ ವಿ.ಜೆ.ಬೈರುಮನೆ, ಭಟ್ಕಳ ಕಾಯ್ಕಿಣಿಯ ವೆಂಕಟೇಶ ನಾಗಪ್ಪ ನಾಯ್ಕ, ಹೊನ್ನಾವರ ಮುಗ್ವಾದ ಐ.ವಿ.ನಾಯ್ಕ, ಕುಮಟಾ ಗೋಕರ್ಣದ ಪ್ರಭಾಕರ ಗಂಗಾಧರ ಪ್ರಸಾದ ಹಾಗೂ ಭಟ್ಕಳ ಹೆಬಳೆಯ ಅಲಿ ಆದಾಂ ಇಬ್ಬು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ಮಾಜಿ ಜಿ.ಪಂ ಅಧ್ಯಕ್ಷ ಆರ್.ಎಸ್.ರಾಯ್ಕರ್ ಉಪ್ಪೋಣಿ ಉಪಸ್ಥಿತರಿದ್ದರು. ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಮುಂತಾದವರಿದ್ದರು.