‘ಪಂಚರತ್ನ’ ಕಾರ್ಯಕ್ರಮ ಹಿನ್ನೆಲೆ ಮುಂದಿನ ತಿಂಗಳು ಎಚ್ಡಿಕೆ ಕುಮಟಾ ಭೇಟಿ – ಗಣಪಯ್ಯ ಗೌಡ

ಕುಮಟಾ: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಅನೇಕ ಕಾರ್ಯ ಯೋಜನೆಗಳನ್ನು ರೂಪಿಸುವ ಜೊತೆಗೆ ಪಕ್ಷದಿಂದ ಆರಂಭವಾಗುವ ‘ಪಂಚರತ್ನ’ ಕಾರ್ಯಕ್ರಮದ ಭಾಗವಾಗಿ ಮುಂದಿನ ತಿಂಗಳು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ತಿಳಿಸಿದರು.

ಕುಮಟಾ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಜೆ.ಡಿ.ಎಸ್ ಬಲ ಕುಂದಿದೆ. ಪಕ್ಷ ಸಂಘಟನೆ ಮಾಡುವ ಮೂಲಕ ಆಯಾ ಭಾಗದ ಮುಖಂಡರಿಗೆ ಒಂದಿಷ್ಟು ಜವಾಬ್ದಾರಿಗಳನ್ನು ನೀಡುವ ಮೂಲಕ ಪಕ್ಷವನ್ನು ಸಂಘಟಿಸಬೇಕು. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಸೂರಜ ನಾಯ್ಕ ಸೋನಿಯವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಈ ಭಾಗದ ಪಕ್ಷ ಸಂಘಟನೆ ಜವಾಬ್ದಾರಿಯನ್ನು ನೀಡಲಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಬಲವನ್ನು ಇನ್ನಷ್ಟು ಪ್ರಬಲಗೊಳಿಸುವ ಮೂಲಕ ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಅಭ್ಯರ್ಥಿಯನ್ನೆ ಗೆಲ್ಲಿಸಬೇಕಾಗಿದೆ ಎಂದರು.

ಪಕ್ಷದಿಂದ ಆರಂಭವಾಗುವ ಪಂಚರತ್ನ ಕಾರ್ಯಕ್ರಮದ ಭಾಗವಾಗಿ ಮುಂದಿನ ತಿಂಗಳು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಈ ಕ್ಷೇತ್ರಕ್ಕೆ ಕರೆಯಿಸಿ, ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಲಾಗುವುದು. ಈ ಕ್ಷೇತ್ರದ ಜನತೆಯಲ್ಲಿ ಬದಲಾವಣೆಯ ಹೊಸ ಆಶಾಭಾವ ಮೂಡಿಸಲಾಗುವುದು ಎಂದರು.

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ ನಾಯ್ಕ ಸೋನಿ ಮಾತನಾಡಿ, ಪಕ್ಷ ಸಂಘಟನೆಯ ಬಗ್ಗೆ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ. ಮುಂದಿನ ತಿಂಗಳು ಪಕ್ಷದಿಂದ ಪಂಚರತ್ನ ಕಾರ್ಯಕ್ರಮ ಆರಂಭವಾಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಭೇಟಿ ನೀಡಲಿದ್ದಾರೆ. ನಮ್ಮ ಜಿಲ್ಲೆಗೂ ಆಗಮಿಸಲಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ ಎಂಬ ವಿಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ. ಇನ್ನು ನಮ್ಮ ಪಕ್ಷದಿಂದ ಮುಂಬರುವ ಎಲ್ಲ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ ಕಲ್ಲಬ್ಬೆ, ಜಿಲ್ಲಾ ಉಪಾಧ್ಯಕ್ಷ ಪಿ.ಟಿ.ನಾಯ್ಕ, ಮೂರೂರ ಗ್ರಾಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ, ಪ್ರಮುಖರಾದ ಜಿ.ಕೆ.ಪಟಗಾರ, ಬಲೀಂದ್ರ ಗೌಡ, ಸತೀಶ ಮಹಾಲೆ, ಚಿನ್ನು ಅಂಬಿಗ ಮಿರ್ಜಾನ್, ಮಹೇಂದ್ರ ನಾಯ್ಕ ಮತ್ತಿತರರು ಇದ್ದರು.