107 ನೇ ಜನ್ಮದಿನದ ಅಂಗವಾಗಿ ‘ಅರಸು’ ಕೊಡುಗೆಗಳನ್ನು ಸ್ಮರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕಾ ಪಂಚಾಯತ ಹಾಗೂ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಡಿ. ದೇವರಾಜ ಅರಸು ಅವರ 107 ಜನ್ಮ ದಿನಾಚರಣೆಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಡಿ.ದೇವರಾಜ ಅರಸು ಅವರು 8 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿ ಹಿಂದುಳಿದವರನ್ನು ಉದ್ಧರಿಸಿದ್ದರು. ಉಳುವವನೇ ಭೂ ಒಡೆಯ ಭೂ ಸುಧಾರಣೆಯು ಅವರ ಕ್ರಾಂತಿಕಾರಕ ಕಾರ್ಯಕ್ರಮವಾಗಿತ್ತು. ಅಧಿಕಾರದಿಂದ ಬಡತನ, ಅಸ್ಪ್ರಶ್ಯತೆ, ಅಪಮಾನಗಳನ್ನು ಜನರ ಮಧ್ಯೆ ನಿಂತು ಗುರುತಿಸಿ, ಬಡಜನರ ಶಕ್ತಿಯ ಮೂಲಕ ಅನಿಷ್ಠ ವ್ಯವಸ್ಥೆಯನ್ನು ಬಡಿದೋಡಿಸಲು ಯತ್ನಿಸಿದ್ದರು. ಅವರ ಆದರ್ಶನ ನಡೆ-ನುಡಿ, ತತ್ವ-ಸಿದ್ಧಾಂತಗಳು ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.

ಡಿ. ದೇವರಾಜ ಅರಸು ಅವರ ಜೀವನದ ಕುರಿತು ನಿವೃತ್ತ ಉಪನ್ಯಾಸಕ ಡಾ. ಎಂ. ಆರ್. ನಾಯಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಆಯುಕ್ತ ರಾಘವೇಂದ್ರ ಜಗಲಸರ, ತಹಸೀಲ್ದಾರ ವಿವೇಕ ಶೇಣ್ವಿ, ತಾ.ಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಪುರಸಭಾ ಮುಖ್ಯಾಧಿಕಾರಿ ಅಜಯ ಭಂಡಾರರ್ಕರ, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಗಣೇಶ ಪಟಗಾರ ವೇದಿಕೆಯಲ್ಲಿದ್ದರು.