ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಾಭಿಮಾನ ಬೆಳೆಯಬೇಕು – ಪ್ರೊ. ಹೆಚ್.ಹೆಚ್. ಭಟ್

ಕಾರವಾರ: ಮಕ್ಕಳ ಮನಸ್ಸು ಬಹಳ ಮುಗ್ಧವಾಗಿರುತ್ತದೆ. ಅವರು ನಾವು ಏನು ಹೇಳಿದರೂ ಒಪ್ಪುವಂತೆ ಇರುತ್ತಾರೆ. ಇಂತಹ ಮಕ್ಕಳಲ್ಲಿ ಒಳ್ಳೆಯ ಸದ್ಗುಣಗಳನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದು ಸದಾಶಿವಗಡದ ಬಾಪೂಜಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಹೆಚ್. ಹೆಚ್. ಭಟ್ ಹೇಳಿದರು.

ಸದಾಶಿವಗಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಾಗಪೊಂಡ ನಂಬರ್-1 ನಲ್ಲಿ ಶನಿವಾರ ಆಜಾದ್ ಯೂಥ್ ಕ್ಲಬ್ ಕಾರವಾರ ದವರು ಸದ್ಭಾವನಾ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಮಕ್ಕಳಿಗೆ ಉಚಿತ ಬ್ಯಾಗ್ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಾಭಿಮಾನ ಹಾಗೂ ಭಾವೈಕ್ಯತೆ ಬೆಳೆಸಬೇಕು. ದಿನನಿತ್ಯ ನಾವು ಮಾಡುವ ಒಳ್ಳೆಯ ಕಾರ್ಯಗಳು ಸಹ ದೇಶಪ್ರೇಮವನ್ನು ಸೂಚಿಸುತ್ತದೆ. ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದನ್ನು ತಲುಪಲು ಪ್ರಯತ್ನಿಸಬೇಕು. ದೇಶ ಸೇವೆಗೆ ನಾವು ಈಗಿನಿಂದಲೇ ಸಿದ್ಧವಾಗಬೇಕು ಎಂದರು.

ಮಿಮಿಕ್ರಿ ಕಲಾವಿದ ವಸಂತ್ ಬಾಂದೆಕರ್ ಮಾತನಾಡಿ ಮಕ್ಕಳಲ್ಲಿ ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆಯ ಗುಣ ಇರಬೇಕು. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ನೈತಿಕ ಗುಣಗಳನ್ನು ಬೆಳೆಸಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ನಜೀರ್ ಅಹಮದ್ ಯು. ಶೇಖ್ ಮಾತನಾಡಿ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕೊಡುವುದರ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಮಾಸ್ಕ್ ವಿತರಿಸಲಾಯಿತು.