ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದೆ. ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಿಗೆ ಮುಂದಿನ ನಾಲ್ಕು ದಿನ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದ್ದು, ಹಲವೆಡೆ ಪ್ರವಾಹ ಭೀತಿ ಮತ್ತು ಹಾನಿ ವರದಿಯಾಗಿದೆ.

ಮುಂಗಾರು ಆರಂಭದಲ್ಲೇ ರಾಜ್ಯಾದ್ಯಂತ ತನ್ನ ರೌದ್ರ ರೂಪ ತೋರಿಸುತ್ತಿದೆ. ನಿರಂತರ ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆ, ಸೇತುವೆ ಹಾಗೂ ಮನೆಗಳಿಗೆ ಹಾನಿಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. 2018-19ರ ಪ್ರಕೃತಿ ವಿಕೋಪದ ಅನುಭವದ ಹಿನ್ನೆಲೆ, ಅಪಾಯದ ಗುಡ್ಡ ಪ್ರದೇಶಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡುವ ಬಗ್ಗೆ ಚಿಂತನೆ ನಡೆದಿದೆ. ಮಡಿಕೇರಿಯ ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿನಗರ ಹಾಗೂ ಅಜಾದ್‌ನಗರ ಸೇರಿದಂತೆ ಸಾವಿರಾರು ಮನೆಗಳನ್ನು ಅಪಾಯದ ಪಟ್ಟಿಗೆ ಸೇರಿಸಲಾಗಿದೆ.
ನದಿ ಪಾತ್ರದ ಪ್ರದೇಶಗಳಾದ ಕುಶಾಲನಗರ, ನೆಲ್ಲಿಹುದಿಕೇರಿ ಹಾಗೂ ಕರಡಿಗೋಡು ಭಾಗಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಸ್ಥಳೀಯರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇತ್ತ ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಮಲ್ಪೆ ಬೀಚ್‌ನಲ್ಲಿ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳುವ ಕಾರಣ ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯುವುದನ್ನು ಸೆಪ್ಟೆಂಬರ್ 15ರವರೆಗೆ ನಿಷೇಧಿಸಲಾಗಿದೆ. ಸಮುದ್ರ ತೀರದಲ್ಲಿ ತಡೆಬೇಲಿ ಅಳವಡಿಸಲಾಗಿದ್ದು, ಟೂರಿಸ್ಟ್ ಪೊಲೀಸ್, ಲೈಫ್‌ಗಾರ್ಡ್ ಹಾಗೂ ಹೋಮ್‌ಗಾರ್ಡ್ ಸಿಬ್ಬಂದಿ ನಿರಂತರ ಕಣ್ಗಾವಲು ನಡೆಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ಭಾರೀ ಮಳೆಗೆ ಸಂಪರ್ಕ ಸೇತುವೆ ಕುಸಿದಿದೆ. ಇದರ ಪರಿಣಾಮ ಚಿಂಚೋಳಿ ಹಾಗೂ ಭಾಲ್ಕಿ ನಡುವಿನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಲ್ಲದೆ ಬೆಡಕಪಳ್ಳಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಬೆಂಗಳೂರು ನಗರಕ್ಕೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಕರಾವಳಿ ಭಾಗದಲ್ಲಿ ಭಾರೀ ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಂಗಳೂರಿನಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಜಿಲ್ಲಾಡಳಿತಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ.
ಒಟ್ಟಾರೆ ಮುಂಗಾರು ಮಳೆಯ ಅಬ್ಬರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆತಂಕ ಮೂಡಿಸಿದ್ದು, ಮುಂದಿನ ಕೆಲ ದಿನಗಳ ಕಾಲ ಜನರು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ಸಲಹೆ ನೀಡಿದೆ. ಮಳೆ ಸಂಬಂಧಿತ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
