ಸ್ವರ್ಣವಲ್ಲಿಯಲ್ಲಿ ನಡೆದ ಸ್ವ ಸಹಾಯ ಸಂಘಗಳ ಸಮಾವೇಶ: ಸಾಧಕ ಸಂಘಗಳನ್ನು ಗೌರವಿಸಿದ ಸ್ಪೀಕರ್ ಕಾಗೇರಿ

ಶಿರಸಿ: ದುಡಿಯುವ ವ್ಯಕ್ತಿಗೆ ಯೋಜನೆ, ಯೋಚನೆ ಅಗತ್ಯ. ಅದಿಲ್ಲದಿದ್ದರೆ ಮಾಡಿದ ದುಡಿಮೆ ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಸ್ವರ್ಣವಲ್ಲಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸ್ವ ಸಹಾಯ ಸಂಘಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಲೆಕ್ಕ ಪತ್ರ ಬರೆದಿಡುವ ರೂಢಿ ಪ್ರತಿ ಕುಟುಂಬಕ್ಕೆ ಅಗತ್ಯ. ಪ್ರತಿಯೊಬ್ಬರಲ್ಲೂ ಒಂದೊಂದು ಸಾಮರ್ಥ್ಯ ಇದ್ದೇ ಇರುತ್ತದೆ. ಈ ಶಕ್ತಿಯನ್ನು ಜೋಡಿಸುವಿಕೆ ಅತ್ಯಗತ್ಯ. ಧಾರ್ಮಿಕ ಕಾರ್ಯಕ್ರಮಗಳನ್ನು ಅಧಿಕ ಪ್ರಮಾಣದಲ್ಲಿ ಮಾಡಬೇಕು ಎಂದರು. ಪಶ್ಚಿಮ ಘಟ್ಟಗಳ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ. ನದಿ ಜೋಡಣೆ ವಿರುದ್ಧ ಗಟ್ಟಿ ನಿಲ್ಲಬೇಕು. ಸರ್ಕಾರದ ಒಳಗಿದ್ದವರೇ ಗಟ್ಟಿ ಧ್ವನಿ ಮಾಡಿದರೆ ಬೆಲೆ ಇದೆ ಎಂದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸ್ವರ್ಣವಲ್ಲೀ ಸಂಸ್ಥಾನ ಸಾಮಾಜಿಕ ಚಟುವಟಿಕೆ ಮೂಲಕ ಸಮಾಜದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಸ್ವರ್ಣವಲ್ಲೀ ಸಂಸ್ಥಾನದ ಅಡಿಯ ಸ್ವ ಸಹಾಯ ಸಂಘಗಳು ಎಲ್ಲರಿಗೂ ಮಾದರಿ ಆಗಬೇಕು. ಸರ್ಕಾರದ ವಿವಿಧ ಯೋಜನೆಗಳಿವೆ. ಅವು ಕಾಗದಕ್ಕೆ ಮಾತ್ರ ಸೀಮಿತ ಆಗಬಾರದು. ಯೋಜನೆಗಳ ಬಗ್ಗೆ ತಿಳಿದುಕೊಂಡು ಅವುಗಳ ಬಳಕೆ ಮಾಡಿಕೊಳ್ಳಬೇಕು. ಸ್ಥಳೀಯ ಉತ್ಪನ್ನಗಳನ್ನು ಹೊರ ಜಗತ್ತಿಗೆ ತಿಳಿಸುವ ಕಾರ್ಯ ನಮ್ಮಿಂದಾಗಬೇಕು. ವಿದೇಶಿಯರು ಆಕ್ರಮಿಸಿಕೊಂಡಿರುವ ದಿನ ಬಳಕೆ ವಸ್ತುಗಳ‌ ಮಾರುಟ್ಟೆಯನ್ನು ಸ್ವ ಸಹಾಯ ಸಂಘಗಳು ಆವರಿಸಿಕೊಳ್ಳಬೇಕು. ಗುಣಮಟ್ಟ ಕಾಪಾಡಿಕೊಂಡು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸ್ವ ಸಹಾಯ ಸಂಘಗಳು ಮುಂದಾಗಬೇಕು ಎಂದರು.

ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಸ್ವ ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿವೆ. ಜನರ ಆರೋಗ್ಯ ಸುಧಾರಣೆಗೆ ಸ್ವ ಸಹಾಯ ಸಂಘಗಳ ಕೊಡುಗೆ ಜಾಸ್ತಿ ಆಗಲಿ ಎಂದರು.

ಕೃಷಿಕ, ಸಮಾಜ ಸೇವಕ ಗುರುಪಾದ ಹೆಗಡೆ ಎಲ್ಲೆಕೊಪ್ಪ ಅವರನ್ನು ಸನ್ಮಾನಿಸಲಾಯಿತು.ಎಂ ಸಿ ಹೆಗಡೆ, ವಿ ಎನ್ ಹೆಗಡೆ ಇತರರಿದ್ದರು.

ಲಿಂಬು ಮೌತ್ ಫ್ರೆಶ್ನರ್ ಗೆ ಮುಗಿ ಬೀಳುವ ಶಾಸಕರು, ಸಚಿವರು.!

ಸ್ವ ಸಹಾಯ ಸಂಘಗಳ ಉತ್ಪನ್ನಕ್ಕೆ ಯಾವ ಮಟ್ಟದ ಬೇಡಿಕೆ ಇದೆ ಎಂಬುದನ್ನು ಸ್ವತಃ ಕಾಗೇರಿಯವರೇ ತಮ್ಮ ಅನುಭವ ಹಂಚಿಕೊಂಡರು. ಯಾವಾಗಲೋ ಹಳ್ಳಿಕಡೆ ಹೋದಾಗ ಸ್ಥಳೀಯ ಸಂಘಗಳು ಸಿದ್ದಪಡಿಸಿದ್ದ ಲಿಂಬು ಮೌತ್ ಪ್ರೆಶ್ನರ್ ಖರೀದಿಸಿದ್ದೆ. ವಿಧಾನ ಸೌಧದ ಆವರಣದಲ್ಲಿ ನಾನು ಲಿಂಬು ಫ್ರೆಶ್ನರ್ ತಿಂದಿದ್ದು ನೋಡಿ ಉಳಿದ ಶಾಸಕರು, ಸಚಿವರೂ ನನ್ನಿಂದ ಪಡೆದು ತಿಂದಿದ್ದರು. ಆ ಬಳಿಕ ಎಲ್ಲರೂ ನನ್ನಲ್ಲಿ ಲಿಂಬು ಪ್ರೆಶ್ನರ್ ಕೇಳಲಾರಂಭಿಸಿದ್ದಾರೆ. ಹಲವರು ಈಗಲೂ ವಿಧಾನಸೌಧದ ನನ್ನ ಚೇಂಬರ್ ಗೆ ಬಂದು ಲಿಂಬು ಮೌತ್ ಫ್ರೆಶ್ನರ್ ತಿಂದು ಹೋಗುತ್ತಿದ್ದಾರೆ ಎಂದು ಕಾಗೇರಿ ತಮ್ಮ ಅನುಭವ ಹಂಚಿಕೊಂಡರು.