ಕರಾವಳಿಯಲ್ಲಿ ಬಂದರುಗಳ ಅಭಿವೃದ್ಧಿ ಕಾಮಗಾರಿ‌ ಶೀಘ್ರ ಆರಂಭ – ಸಚಿವ ಅಂಗಾರ

ಗೋಕರ್ಣ: ಕರಾವಳಿಯ ವಿವಿಧ ಬಂದರುಗಳ ಅಭಿವೃದ್ದಿಗಾಗಿ ಕಾಮಗಾರಿ ಮಂಜೂರಾಗಿದ್ದು, ಶೀಘ್ರದಲ್ಲಿ ಕಾರ್ಯ ಪ್ರಾರಂಭವಾಗಲಿದೆ. ಅದರಂತೆ ಇಲ್ಲಿನ ತದಡಿ ಬಂದರು ಅಭಿವೃದ್ದಿ ಕಾರ್ಯವು ನಡೆಯಲಿದೆ ಎಂದು ರಾಜ್ಯ ಮೀನುಗಾರಿಕೆ ಸಚಿವ ಎಸ್. ಅಂಗಾರು ಹೇಳಿದ್ದಾರೆ. ಅವರು ಬುಧವಾರ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದರು.

ಈಗಾಗಲೇ ಮೀನುಗಾರಿಕೆ ಇಲಾಖೆಗೆ ಸಂಬಂಧ ಪಟ್ಟ ಬಂದರುಗಳಲ್ಲಿ ಹೂಳು ತುಂಬುವುದು, ಮೀನುಗಾರಿಕೆಗೆ ಬೋಟ್ ತೆರಳುವ ಸ್ಥಳದಲ್ಲಿ ತೊಂದರೆಯಾಗುವುದನ್ನ ಇಲಾಖೆ ಗುರುತಿಸಿದ್ದು, ಇದರಲ್ಲಿ ತದಡಿ ಬಂದರು ಸೇರಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೇ ಮುಗಿದಿದ್ದು, ಕೆಲಸ ಪ್ರಾರಂಭಿಸಲಾಗುತ್ತದೆ ಎಂದರು.

ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಂದಾಗ ಕರಾವಳಿ ಅಭಿವೃದ್ದಿ ಕೇಂದ್ರದಿಂದ 3000 ಕೋಟಿ ರೂಪಾಯಿ ಹಣಕಾಸಿನ ನೆರವು ನೀಡುವುದಾಗಿ ಘೋಷಿಸಿದ್ದು, ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಮೀನುಗಾರರಿಗೆ ಮತ್ತು ಮೀನುಗಾರಿಕೆಗೆ ಸಹಾಯ, ಸಹಕಾರ ನೀಡುವುದಾಗಿ ತಿಳಿಸಿದರು. ತದಡಿ ಸೇರಿದಂತೆ ಈ ಭಾಗದ ವಿವಿಧೆಡೆಯ ಮೀನುಗಾರಿಕೆ, ಕಡಲು ಕೊರೆತ ಮತ್ತಿತರ ಸಮಸ್ಯೆ ಬಗ್ಗೆ ವರದಿ ಪಡೆದು ಪರಿಹರಿಸಲಾಗುವುದು ಎಂದು ತಿಳಿಸಿದರು.